ನ್ಯೂಸ್

ನೀವು ನನ್ನ ಧ್ವನಿಯಾಗಿದ್ದೀರಾ, ನಾನು ನಿಮ್ಮ ಧ್ವನಿಗೆ ಮುಖವಾಗಿದ್ದೇನೆ.. ಬೇಗ ಬನ್ನಿ

ಎಸ್​ಪಿ ಬಾಲಸುಬ್ರಮಣ್ಯಂ ಕಳೆದ ನಾಲ್ಕು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚೇತರಿಕೆಗೆ ಇಡೀ ದೇಶ ಪ್ರಾರ್ಥಿಸುತ್ತಿದೆ. ಸೆಲೆಬ್ರಿಟಿಗಳು ಸೋಷಿಯಲ್​ ಮೀಡಿಯಾದಲ್ಲಿ ಮರಳಿ ಬನ್ನಿ ಎಂದು ಅವರೊಟ್ಟಿಗೆ ಕಳೆದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಸೌತ್ ಸೂಪರ್​ಸ್ಟಾರ್ ಕಮಲ್​ ಹಾಸನ್​ ಸಹ ಅವರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ.

‘ನನ್ನ ನಲ್ಮೆಯ ಸಹೋದರನೇ, ನಾವೆಲ್ಲ ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದೇವೆ. ತುಂಬ ವರ್ಷಗಳಿಂದ ನನ್ನ ಧ್ವನಿಯಾಗಿದ್ದೀರಿ. ನಿಮ್ಮ ಧ್ವನಿಗೆ ನಾನು ಮುಖವಾಗಿದ್ದೇನೆ. ನಿಮ್ಮ ಧ್ವನಿ ಕೇಳಬೇಕೆನಿಸುತ್ತಿದೆ. ಮರಳಿ ಬನ್ನಿ. ಆದಷ್ಟು ಬೇಗ ಬನ್ನಿ’ ಎಂದಿದ್ದಾರೆ.

ಕಮಲ್​ ಹಾಸನ್​ ಮತ್ತು ಎಸ್​ಪಿಬಿ ಹಲವು ದಶಕಗಳಿಂದ ಸ್ನೇಹಿತರು. ಕಮಲ್​ ಅವರ ಸಾಕಷ್ಟು ಸಿನಿಮಾಗಳಿಗೆ ಎಸ್​ಪಿಬಿ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲ ಕಮಲ್​ ಅವರ ಎಷ್ಟೋ ಸಿನಿಮಾಗಳಿಗೆ ಡಬ್​ ಸಹ ಮಾಡಿದ್ದಾರೆ. ಇದೀಗ ಆ ಗೆಳೆಯ ಆದಷ್ಟು ಬೇಗ ಗುಣಮುಖನಾಗಿ ಆಗಮಿಸಲಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 5 ರಂದು ಕರೊನಾ ಸೋಂಕಿಗೆ ತುತ್ತಾಗಿದ್ದ ಎಸ್​ಪಿಬಿ, ಗುರುವಾರ ಹೆಚ್ಚುವರಿ ಚಿಕಿತ್ಸೆಗೆಂದು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿರುವ ಬಗ್ಗೆ ಆಸ್ಪತ್ರೆ ವೈದ್ಯರು ಮತ್ತು ಎಸ್​ಪಿಬಿ ಪುತ್ರ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)