ಆಂಧ್ರಪ್ರದೇಶ: ರೆಬಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಪ್ರಾಜೆಕ್ಟ್ ಕೆ ಚಿತ್ರದ ಶೀರ್ಷಿಕೆ ಇದೀಗ 'ಕಲ್ಕಿ 2898 AD' ಎಂದು ಬದಲಾವಣೆಗೊಂಡಿದ್ದು, ಟೈಟಲ್ ರೀತಿಯೇ ಸಿನಿಮಾದ ಬಿಡುಗಡೆ ದಿನಾಂಕವು ಬದಲಾಗಲಿದೆ ಎಂದು ವರದಿ ಹೇಳಿದೆ!
ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಪ್ರಭಾಸ್-ನಾಗ್ ಅಶ್ವಿನ್ ಸೇರಿದಂತೆ ಚಿತ್ರತಂಡ ಪ್ರಾಜೆಕ್ಟ್ ಕೆ ಶೀರ್ಷಿಕೆಯನ್ನು 'ಕಲ್ಕಿ 2898 AD' ಎಂದು ಅನಾವರಣಗೊಳಿಸಿದೆ. ಸೈನ್ಸ್-ಫಿಕ್ಷನ್ ಆಧರಿತವಾದ ಈ ಚಿತ್ರದ ಕಿರು ವಿಡಿಯೋ ಝಲಕ್ ಅನ್ನು ಪ್ರಭಾಸ್ ರಿಲೀಸ್ ಮಾಡಿದರು. ಗ್ಲಿಂಪ್ಸ್ ದೃಶ್ಯವನ್ನು ನೋಡಿದ ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಚಿತ್ರತಂಡಕ್ಕೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಸದ್ಯ ಸಿನಿಮಾದ ಕಿರು ವಿಡಿಯೋ ಯುಟ್ಯೂಬ್ನಲ್ಲಿ ಟ್ರೆಂಡ್ ಆಗಲು ಪ್ರಾರಂಭಿಸಿದೆ.
ಈ ಮಧ್ಯೆ ಚಿತ್ರತಂಡ ಇತ್ತೀಚೆಗೆ ಬಿಡುಗಡೆಗೊಳಿಸಿದ ಕಿರು ವಿಡಿಯೋ ಮತ್ತು ಪೋಸ್ಟರ್ನಲ್ಲಿ ಬಿಡುಗಡೆ ದಿನಾಂಕವನ್ನು ತೆಗೆದುಹಾಕಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಉದ್ಭವಗೊಂಡಿದ್ದು, ಈ ಹಿಂದೆ ಚಿತ್ರತಂಡ ಜನವರಿ 12, 2024 ರಂದು ರಿಲೀಸ್ ಮಾಡಲಿದ್ದೇವೆ ಎಂದು ತಿಳಿಸಿತ್ತು. ಆದ್ರೆ, ಇದೀಗ ಡೇಟ್ ಕಣ್ಮರೆಯಾಗಿರುವುದು ಫ್ಯಾನ್ಸ್ಗಳಲ್ಲಿ ತೀವ್ರ ಗೊಂದಲವನ್ನು ಸೃಷ್ಟಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆರಂಭಗೊಂಡಿದ್ದು, ಯೋಜಿಸಿದಂತೆ ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗುವುದಿಲ್ಲ ಎಂಬ ವದಂತಿಗಳು ಈಗ ವ್ಯಾಪಕವಾಗಿ ಹರಿದಾಡುತ್ತಿದೆ,(ಏಜೆನ್ಸೀಸ್).