Operation Blue Star: ಈ ಹಿಂದೆ ಇಂದಿರಾ ಗಾಂಧಿ ಸರ್ಕಾರ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯನ್ನು ನಿಭಾಯಿಸಿದ ರೀತಿ ಬಗ್ಗೆ ಮಾಜಿ ಗೃಹ ಸಚಿವ ಪಿ. ಚಿದಂಬರಂ ನೀಡಿರುವ ಹೇಳಿಕೆಯ ಕುರಿತು ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದು, ಚಿದಂಬರಂ ಅವರ ಇತ್ತೀಚಿನ ಹೇಳಿಕೆಗಳನ್ನು ಕೈ ನಾಯಕ ರಶೀದ್ ಅಲ್ವಿ ಟೀಕಿಸಿದ್ದಾರೆ.
ಚಿದಂಬರಂ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇರುವುದರಿಂದ, ಆ ಒತ್ತಡದಲ್ಲಿ ಈ ರೀತಿ ಹೇಳಿಕೆ ನೀಡುತಿದ್ದಾರೆಯೇ ಎಂದು ಪ್ರಶ್ನಿಸಿದ ಅಲ್ವಿ, ಅವರ ಈ ರೀತಿಯ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೆ ಎಲ್ಲರಿಗೂ ನೋವುಂಟಾಗಿದೆ, ನಮ್ಮ ಪಕ್ಷದಿಂದ ಎಲ್ಲ ರೀತಿಯ ಸ್ಥಾನಮಾನ ಪಡೆದ ಹಿರಿಯ ನಾಯಕರು ಬುದ್ದಿವಂತಿಕೆಯಿಂದ ಮಾತನಾಡಬೇಕು. ಪಕ್ಷಕ್ಕೆ ಮುಜುಗರ ಉಂಟುಮಾಡುವ ಹೇಳಿಕೆಗಳನ್ನು ಪದೇ ಪದೇ ನೀಡುವುದು ಸರಿಯಲ್ಲ ಎಂದಿದ್ದಾರೆಂದು ಮೂಲಗಳು ತಿಳಿಸಿವೆ.
ಬಿಜೆಪಿ ಮಾಡುವ ಕೆಲಸವನ್ನು ಚಿದಂಬರಂ ಮಾಡುತ್ತಿದ್ದಾರೆ. ಹಿರಿಯ ನಾಯಕರ ಈ ಹೇಳಿಕೆ ದುರದೃಷ್ಟಕರ. ಚಿದಂಬರಂ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇರುವುದರಿಂದ, ಈ ಹೇಳಿಕೆ ನೀಡುವಂತೆ ಮಾಜಿ ಗೃಹ ಸಚಿವರನ್ನು ಯಾರಾದರೂ ಒತ್ತಡ ಹೇರುತಿದ್ದಾರಾ..?. ಬಿಜೆಪಿ ವಿರುದ್ಧ ಮಾತನಾಡಬೇಕಾದ ಚಿದಂಬರಂ, ಕಾಂಗ್ರೆಸ್‌ನ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಇದು ತಪ್ಪು. ಪಕ್ಷದಿಂದ ಎಲ್ಲವನ್ನೂ ಪಡೆದಿರುವ ಅವರು, ಈಗ ಅದೇ ಪಕ್ಷವನ್ನು ಹಾಳುಮಾಡಲು ಏಕೆ ಪ್ರಯತ್ನಿಸುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದರು.
ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ನಡೆದ ಖುಷ್ವಂತ್ ಸಿಂಗ್ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಚಿದಂಬರಂ, ಅಮೃತಸರದಲ್ಲಿರುವ ಸ್ವರ್ಣ ದೇವಾಲಯವನ್ನು ಮೂಲಭೂತವಾದಿಗಳ ನಿಯಂತ್ರಣದಿಂದ ಮರಳಿ ಪಡೆಯಲು ಇಂದಿರಾ ಗಾಂಧಿ ತಪ್ಪು ಮಾರ್ಗವನ್ನು ಆರಿಸಿಕೊಂಡರು, ಕೆಲವು ವರ್ಷಗಳ ನಂತರ, ಸೈನ್ಯವನ್ನು ದೂರವಿಡುವ ಮೂಲಕ ಸ್ವರ್ಣ ದೇವಾಲಯವನ್ನು ಮರಳಿ ಪಡೆಯಲು ನಾವು ಸರಿಯಾದ ಮಾರ್ಗವನ್ನು ತೋರಿಸಿದ್ದೇವೆ ಎಂದು ಹೇಳಿದರು. ಆ ಒಂದು ತಪ್ಪಿಗೆ ಶ್ರೀಮತಿ ಗಾಂಧಿ ತಮ್ಮ ಪ್ರಾಣವನ್ನೇ ತೆತ್ತರು. ಅದು ಸೇನೆ, ಪೊಲೀಸ್, ಗುಪ್ತಚರ ಮತ್ತು ನಾಗರಿಕ ಸೇವೆಗಳ ನಿರ್ಧಾರವಾಗಿತ್ತು. ನೀವು ಶ್ರೀಮತಿ ಗಾಂಧಿಯವರ ಮೇಲೆ ಮಾತ್ರ ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು.
ತಿಂಗಳುಗಳ ನಂತರ, ಇಂದಿರಾ ಗಾಂಧಿಯವರ ಸಿಖ್ ಅಂಗರಕ್ಷಕರೇ, ಅವರನ್ನು ಗುಂಡಿಕ್ಕಿ ಕೊಂದರು. ಅವರ ಹತ್ಯೆಯ ನಂತರ ಸಮುದಾಯದ ವಿರುದ್ಧ ವ್ಯಾಪಕ ಹಿಂಸಾಚಾರ ನಡೆಯಿತು. ಈ ಹಿಂಸಾಚಾರಕ್ಕೆ ಹಲವಾರು ಕಾಂಗ್ರೆಸ್ ನಾಯಕರು ಕಾರಣರೆಂದು ಶಂಕಿಸಲಾಗಿದೆ. ಸರ್ಕಾರದ ಅಂದಾಜಿನ ಪ್ರಕಾರ, ದೆಹಲಿ ಮತ್ತು ಇತರೆಡೆಗಳಲ್ಲಿ 3,000 ಕ್ಕೂ ಹೆಚ್ಚು ಸಿಖ್ಖರು ಮೃತರಾದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಬಿಸಿಸಿಐ ಮೆಗಾ ಪ್ಲಾನ್: ಏಷ್ಯಾ ಕಪ್ ಟ್ರೋಫಿ ಕೊಡದೇ ಕಳ್ಳಾಟವಾಡಿದ ನಖ್ವಿಗೆ ಕಾದಿದೆ ದೊಡ್ಡ ಆಘಾತ! Mohsin Naqvi
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಾಜಿ ಗೃಹ ಸಚಿವ ಚಿದಂಬರಂ, ಮುಂಬೈ ದಾಳಿಯ ನಂತರ ಪ್ರತೀಕಾರದ ಆಲೋಚನೆ ಅವರ ಮನಸ್ಸಿನಲ್ಲಿ ಬಂದಿತ್ತು, ನಾನು ಪ್ರಧಾನಿ ಮತ್ತು ಸಂಬಂಧಪಟ್ಟ ಇತರ ಪ್ರಮುಖರೊಂದಿಗೆ ಈ ಕುರಿತಾಗಿ ಚರ್ಚಿಸಿದೆ. ದಾಳಿ ನಡೆಯುತ್ತಿರುವಾಗ ಪ್ರಧಾನಿ ಈ ವಿಷಯದ ಬಗ್ಗೆ ಚರ್ಚಿಸಿದ್ದರು, ಈ ಕುರಿತಾದ ತೀರ್ಮಾನವು ವಿದೇಶಾಂಗ ಸಚಿವಾಲಯ ಮತ್ತು ಐಎಫ್ಎಸ್ನಿಂದ ಪ್ರಭಾವಿತವಾಗಿದೆ. ನಾವು ಪರಿಸ್ಥಿತಿಗೆ ದೈಹಿಕವಾಗಿ ಪ್ರತಿಕ್ರಿಯಿಸಬಾರದು, ರಾಜತಾಂತ್ರಿಕ ವಿಧಾನಗಳನ್ನು ಬಳಸುವ ಮೂಲಕ ತಿರುಗೇಟು ನೀಡುವ ಆಲೋಚನೆ ಇತ್ತು ಎಂದು ಹೇಳಿದರು. ಯುದ್ಧ ಆರಂಭಿಸಬೇಡಿ ಎಂದು ಸರ್ಕಾರದ ಮೇಲೆ ಬರುತ್ತಿದ್ದ ವಿದೇಶಗಳ ಒತ್ತಡದ ಮಧ್ಯೆ ಈ ತೀರ್ಮಾನಕ್ಕೆ ಬರಲಾಯಿತು ಎಂದಿದ್ದರು.
ಚಿದಂಬರಂ ಹೇಳಿಕೆ ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ, ಇತ್ತೀಚೆಗೆ ಮಾಜಿ ಗೃಹ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಸಂದರ್ಶನವೊಂದರಲ್ಲಿ ದೊಡ್ಡ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಮುಂಬೈ ದಾಳಿಯ ನಂತರ, ನಮ್ಮ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧವಾಗಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಇಡೀ ದೇಶವೂ ಅದನ್ನೇ ಬಯಸಿತ್ತು. ಆದರೆ ಆ ಕಾಂಗ್ರೆಸ್ ನಾಯಕನ ಪ್ರಕಾರ, ಆಗಿನ ಸರ್ಕಾರವು ಬೇರೆ ದೇಶದ ಒತ್ತಡದಿಂದಾಗಿ ಭಾರತದ ಪಡೆಗಳು ಕ್ರಮ ಕೈಗೊಳ್ಳದಂತೆ ತಡೆಯಿತು. ವಿದೇಶಿ ಒತ್ತಡದಲ್ಲಿ ಈ ನಿರ್ಧಾರವನ್ನು ಯಾರು ತೆಗೆದುಕೊಂಡರು, ಮುಂಬೈನ ರಾಷ್ಟ್ರೀಯ ಭಾವನೆಯೊಂದಿಗೆ ಯಾರು ಆಟವಾಡಿದರು ಎಂಬುದನ್ನು ಕಾಂಗ್ರೆಸ್ ದೇಶಕ್ಕೆ ತಿಳಿಸಬೇಕು. ಕಾಂಗ್ರೆಸ್‌ನ ಈ ದೌರ್ಬಲ್ಯ ಭಯೋತ್ಪಾದಕರನ್ನು ಬಲಪಡಿಸಿತು ಮತ್ತು ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಿತು, ದೇಶವು ಪದೇ ಪದೇ ಜೀವಗಳನ್ನು ಕಳೆದುಕೊಂಡಿತು ಎಂದು ಪ್ರಧಾನಿ ಹೇಳಿದರು.(ಏಜೆನ್ಸೀಸ್)