

Akhilesh Yadav: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು, ಮಾಜಿ ಸಿಎಂ ಅಖಿಲೇಶ್ ಯಾದವ್ ನುಸುಳುಕೋರರಿಗೆ ಹೋಲಿಸಿದ್ದಾರೆ. ಲಕ್ನೋದ ಲೋಹಿಯಾ ಪಾರ್ಕ್ನಲ್ಲಿ ನಡೆದ ರಾಮ್ ಮನೋಹರ್ ಲೋಹಿಯಾ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ಬಿಜೆಪಿಯ ಬಳಿ ಇರುವುದು ನಕಲಿ ಅಂಕಿ ಅಂಶಗಳು, ಯಾರಾದರೂ ಅವುಗಳನ್ನು ನಂಬಿದರೆ, ಅವರು ದಾರಿ ತಪ್ಪುವುದು ನಿಶ್ಚಿತ ಎಂದರು.
ಉತ್ತರಪ್ರದೇಶದಲ್ಲೂ ನುಸುಳುಕೋರರಿದ್ದಾರೆ. ಮುಖ್ಯಮಂತ್ರಿ ಉತ್ತರಾಖಂಡದವರು. ಅವರನ್ನು ಮರಳಿ ಅಲ್ಲಿಗೆ ಕಳುಹಿಸಬೇಕು ಎಂದು ಹೇಳಿದರು. ಯೋಗಿ ಬಿಜೆಪಿಯ ಸದಸ್ಯರಾಗಿರಲಿಲ್ಲ, ಅವರು ಬೇರೆ ಪಕ್ಷದ ಸದಸ್ಯರಾಗಿದ್ದರು. ಹಾಗಾದರೆ ಈ ರೀತಿ ಒಳನುಸುಳುವವರನ್ನು ಯಾವಾಗ ತೆಗೆದುಹಾಕಲಾಗುತ್ತದೆ ಎಂದು ಪ್ರಶ್ನಿಸಿದರು. ಕೆಲವು ರಾಜಕೀಯ ಪಕ್ಷಗಳು ಒಳನುಸುಳುವವರನ್ನು ಮತಬ್ಯಾಂಕ್ ಆಗಿ ಪರಿಗಣಿಸುತ್ತವೆ ಮತ್ತು ಗುಜರಾತ್ ಮತ್ತು ರಾಜಸ್ಥಾನ ಗಡಿಗಳಲ್ಲಿ ಒಳನುಸುಳುವಿಕೆ ಏಕೆ ನಡೆಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ ಎರಡು ದಿನಗಳ ನಂತರ ಯಾದವ್ ಕಡೆಯಿಂದ ಈ ಹೇಳಿಕೆಗಳು ಹೊರಬಿದ್ದಿವೆ.
ರಾಮ್ ಮನೋಹರ್ ಲೋಹಿಯಾ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸಿ ಮಾತನಾಡಿದ ಯಾದವ್, ಡಾ. ಲೋಹಿಯಾ ಅವರು ತಮ್ಮ ಜೀವನದುದ್ದಕ್ಕೂ ಅನ್ಯಾಯ ಮತ್ತು ಬೇಜವಾಬ್ದಾರಿಯ ವಿರುದ್ಧ ಹೋರಾಡಿದರು, ಇಂದು ನಾವೆಲ್ಲಾ ಅವರು ತೋರಿಸಿದ ಹಾದಿಯಲ್ಲಿ ನಡೆಯುವ ಮೂಲಕ ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಘನತೆಯನ್ನು ಖಚಿತಪಡಿಸಿಕೊಳ್ಳಲು ನಾವು ಪ್ರತಿಜ್ಞೆ ಮಾಡುತ್ತೇವೆ. ಲೋಹಿಯಾ ಜಾತಿ ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂದು ಕರೆ ನೀಡಿದ್ದರು ಎಂದು ಯಾದವ್ ಹೇಳಿದರು.
ರಾಯ್ಬರೇಲಿ ಗುಂಪು ಹತ್ಯೆ ಪ್ರಕರಣದ ಕುರಿತು ಮಾತನಾಡಿದ ಮಾಜಿ ಸಿಎಂ, ನಾವು ಎನ್ಸಿಆರ್ಬಿ ಡೇಟಾವನ್ನು ನೋಡಿದರೆ, ಈ ಸರ್ಕಾರದ ಅವಧಿಯಲ್ಲಿ ದಲಿತರ ವಿರುದ್ಧ ಗರಿಷ್ಠ ದೌರ್ಜನ್ಯಗಳು ನಡೆದಿವೆ ಎಂದು ಸ್ಪಷ್ಟವಾಗಿ ತಿಳಿದುಬರುತ್ತದೆ. ಇತ್ತೀಚೆಗೆ, ವಾಲ್ಮೀಕಿ ಸಮುದಾಯದ ಯುವಕನನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ನಾವು ನೋಡಿದ್ದೇವೆ. ಪ್ರಸ್ತುತ ದಲಿತರು ಮತ್ತು ಹಿಂದುಳಿದ ಸಮುದಾಯಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯ ನಡೆಯುತ್ತಿದೆ ಎಂದು ಹೇಳಿದರು.
ಸರ್ಕಾರದ ಶೂನ್ಯ ಸಹಿಷ್ಣುತೆಯ ಹೇಳಿಕೆಗಳು ತಳಮಟ್ಟದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ, ಕಾನೂನು, ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸರು, ರಾಜಕೀಯ ವಿರೋಧಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಕ್ಕಾಗಿ ತಮ್ಮನ್ನು ಮೀಸಲಾಗಿಟ್ಟುಕೊಂಡಿದ್ದಾರೆ, ಇದರ ಪರಿಣಾಮದಿಂದಲೇ ರಾಜ್ಯದ ಮಹಿಳೆಯರು ಅಸುರಕ್ಷಿತ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ ಎಂದು ಹೇಳಿದರು. ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಯೋಚಿಸುತ್ತದೆ. ಮುಖ್ಯಮಂತ್ರಿ ಬಿಳಿ ಮೇಜಿನ ಮೇಲೆ ಕುಳಿತು ಕಪ್ಪು ಸುಳ್ಳುಗಳನ್ನು ಹೇಳುತ್ತಾರೆ. ಸದ್ಯ ಯುಪಿಯಲ್ಲಿ ದೌರ್ಜನ್ಯ ಮತ್ತು ಭ್ರಷ್ಟಾಚಾರದ ಪ್ರಕರಣಗಳೇ ಹೆಚ್ಚಾಗಿ ನಡೆಯುತ್ತಿವೆ ಎಂದರು.
ಬಿಜೆಪಿ ನಾಯಕರುಗಳ ಸ್ವದೇಶಿ ಹೇಳಿಕೆಯನ್ನು ಟೀಕಿಸಿದ ಅಖಿಲೇಶ್, ಬಿಜೆಪಿಯವರು ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆ ಮಾತನಾಡುತ್ತಾರೆ, ಆದರೆ, ಅವರ ಮನಸ್ಸು ವಿದೇಶಿ ಹಿತಾಸಕ್ತಿಗಳೊಂದಿಗೆ ಜೋಡಿಸಿಕೊಂಡಿವೆ. ಅವರು ಪ್ರಾಮಾಣಿಕವಾಗಿ ಸ್ವದೇಶಿಯಲ್ಲಿ ನಂಬಿಕೆ ಇಟ್ಟರೆ, ಚೀನಾದೊಂದಿಗೆ ವ್ಯಾಪಾರ ನಡೆಸುತ್ತಿರುವುದು ಏಕೆ? ಗೊಬ್ಬರ ಕೇಳಿದ ರೈತರನ್ನು ಲಾಠಿಯಿಂದ ಹೊಡೆಯಲಾಗುತ್ತಿದೆ, ಎಲ್ಲ ಕಡೆಗಳಲ್ಲೂ ಈ ಮಟ್ಟದ ಅನ್ಯಾಯ ನಡೆಯುತ್ತಿದೆ. ಚುನಾವಣಾ ನಿಧಿಗಾಗಿ ಸರ್ಕಾರ ವ್ಯಾಪಾರಿಗಳಿಗೆ ಲಾಭ ಮಾಡಿಕೊಳ್ಳುವ ಅವಕಾಶ ನೀಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಅತಿದೊಡ್ಡ ಜಾತಿವಾದಿ ಪಕ್ಷ, ಹಲವಾರು ಜಿಲ್ಲೆಗಳಲ್ಲಿ ಹಿಂದುಳಿದ ಸಮುದಾಯಗಳ ಅವಕಾಶ ಕಿತ್ತಕೊಂಡು, ನಿರ್ದಿಷ್ಟ ಜಾತಿಯ ಜನರನ್ನು ಮಾತ್ರ ನಿಯೋಜಿಸಲಾಗುತ್ತಿದೆ. ದಲಿತರು ದೌರ್ಜನ್ಯ ಎದುರಿಸುತ್ತಿದ್ದಾರೆ, ಮತ್ತು ನಾವು ಅವರ ದಾಖಲೆಗಳನ್ನು ಸಂಗ್ರಹಿಸುತ್ತೇವೆ ಎಂದು ಹೇಳಿದರು.(ಏಜೆನ್ಸೀಸ್)