ಬಿಸಿಸಿಐ ಮೆಗಾ ಪ್ಲಾನ್: ಏಷ್ಯಾ ಕಪ್​ ಟ್ರೋಫಿ ಕೊಡದೇ ಕಳ್ಳಾಟವಾಡಿದ ನಖ್ವಿಗೆ ಕಾದಿದೆ ದೊಡ್ಡ ಆಘಾತ! Mohsin Naqvi

Mohsin Naqvi
Published on

Mohsin Naqvi : ಏಷ್ಯಾ ಕಪ್-2025 ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವ ಬದಲು ಎಸಿಸಿ ಕಚೇರಿಯಲ್ಲಿ ಬಚ್ಚಿಟ್ಟಿದ್ದ ಏಷ್ಯಾ ಕ್ರಿಕೆಟ್​ ಕೌನ್ಸಿಲ್​ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ದೊಡ್ಡ ಆಘಾತ ನೀಡಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧತೆ ನಡೆಸುತ್ತಿದೆ. ಬಿಸಿಸಿಐ ಜೊತೆ ಹುಡುಗಾಟ ಆಡಿದರೆ ಅದರ ಪರಿಣಾಮ ಹೇಗಿರುತ್ತದೆ ಎಂಬುದನ್ನು ತೋರಿಸಲು ಮುಂದಾಗಿದೆ.

ಹೌದು, ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರನ್ನು ಐಸಿಸಿ ನಿರ್ದೇಶಕ ಹುದ್ದೆಯಿಂದ ತೆಗೆದುಹಾಕಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಏಷ್ಯಾ ಕಪ್ ಪಂದ್ಯಾವಳಿಯ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಅದಕ್ಕೆ ಕಾರಣ ಪಹಲ್ಗಾಮ್ ಮೇಲೆ ನಡೆದ ಉಗ್ರರ ದಾಳಿ. ಇದನ್ನು ಖಂಡಿಸಿ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದರು. ಇದು ಕ್ರೀಡಾ ಲೋಕದಲ್ಲಿ ಭಾರಿ ಚರ್ಚೆಗೂ ಕಾರಣವಾಯಿತು.

ಅಂದಹಾಗೆ, ಏಷ್ಯಾ ಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ಸೇರಿದಂತೆ ಒಟ್ಟು ಮೂರು ಪಂದ್ಯಗಳನ್ನು ಆಡಿದವು. ಮೂರರಲ್ಲೂ ಪಾಕಿಸ್ತಾನ ತಂಡವನ್ನು ಭಾರತ ಸೋಲಿಸಿತು. ಫೈನಲ್​ ಪಂದ್ಯವನ್ನು ಗೆದ್ದ ನಂತರ, ಟೀಮ್ ಇಂಡಿಯಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿರುವ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಇದರ ಪರಿಣಾಮವಾಗಿ, ನಖ್ವಿ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವ ಬದಲು ಎಸಿಸಿ ಕಚೇರಿಯಲ್ಲಿ ತಂದಿಟ್ಟುಕೊಂಡರು. ಇದು ಕೂಡ ವಿವಾದಕ್ಕೆ ಗುರಿಯಾಗಿದೆ.

ನಖ್ವಿ ಅವರ ಈ ವರ್ತನೆಯ ಬಗ್ಗೆ ಬಿಸಿಸಿಐ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದಲ್ಲದೆ, ಅವರ ವರ್ತನೆಯ ವಿರುದ್ಧ ಈಗಾಗಲೇ ಐಸಿಸಿಗೆ ದೂರು ದಾಖಲಾಗಿದೆ ಎಂಬ ವರದಿಗಳಿವೆ. ಟ್ರೋಫಿಯನ್ನು ನೀಡದೆ ವಾಪಸ್ ತೆಗೆದುಕೊಂಡಿದ್ದಕ್ಕಾಗಿ ನಖ್ವಿ ಭಾರತೀಯ ತಂಡಕ್ಕೆ ಕ್ಷಮೆಯಾಚಿಸಿದ್ದಾರೆ. ಆದರೆ, ಟ್ರೋಫಿಯನ್ನು ಇನ್ನೂ ಹಸ್ತಾಂತರಿಸಿಲ್ಲ. ಬಿಸಿಸಿಐ ಅಥವಾ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ನೇರವಾಗಿ ಎಸಿಸಿ ಕಚೇರಿಗೆ ಬಂದು ಅವರ ಕೈಯಿಂದ ಟ್ರೋಫಿಯನ್ನು ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.

ಏಷ್ಯಾ ಕಪ್ ಟ್ರೋಫಿ ಇನ್ನೂ ಎಸಿಸಿ ಕಚೇರಿಯಲ್ಲಿದೆ. ನಖ್ವಿ ತಮ್ಮ ಸಿಬ್ಬಂದಿಗೆ ತಮ್ಮ ಅನುಮತಿಯಿಲ್ಲದೆ ಟ್ರೋಫಿಯನ್ನು ಯಾರಿಗೂ ಹಸ್ತಾಂತರಿಸದಂತೆ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ. ನಖ್ವಿ ಅವರ ವರ್ತನೆಯಿಂದ ಬಿಸಿಸಿಐ ಕೋಪಗೊಂಡಿದೆ. ಅವರಿಗೆ ಬಲವಾದ ಪಾಠ ಕಲಿಸಲು ಬಿಸಿಸಿಐ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿರುವಂತೆ ತೋರುತ್ತದೆ.

ನಖ್ವಿಯವರ ವರ್ತನೆ ಹೀಗೇ ಮುಂದುವರಿದರೆ ಅವರನ್ನು ಐಸಿಸಿ ಮಂಡಳಿಯ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಲು ಬಿಸಿಸಿಐ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದೆ ಎಂದು ವರದಿಯಾಗಿದೆ. ಇತ್ತೀಚಿನ ಬೆಳವಣಿಗೆಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ನಖ್ವಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net