ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟನ ಬಂಧನ
- ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟನ ಬಂಧನ
- 5,000 ಕೋಟಿ ಡ್ರಗ್ ಸಾಮಾಜ್ಯದ ದೊರೆ ಸಲೀಂ ಡೋಲಾಸ್ ಇಸ್ತಾನ್‌ಬುಲ್‌ನಲ್ಲಿ ಬಂಧನ
- ಭಾರತಕ್ಕೆ ಹಸ್ತಾಂತರ ಮಾಡುವ ಕುರಿತು ನಡೆಯುತ್ತಿರುವ ಸಭೆ
ಇಸ್ತಾನ್‌ಬುಲ್: ಅಂತರರಾಷ್ಟ್ರೀಯ ಮಾದಕ ವಸ್ತುಗಳ ಕಳ್ಳಸಾಗಣೆ ಲೋಕದ ದೊಡ್ಡ ತಲೆ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ನ ಆಪ್ತ ಸಹಚರ ಸಲೀಂ ಡೋಲಾ (Salim Dola) ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಅಲ್ಲಿನ ಭದ್ರತಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದು, ದಶಕಗಳಿಂದ ಮಾದಕ ವಸ್ತುಗಳ ಅಧಿಪತ್ಯ ಸಾಧಿಸಿದ್ದ ಡೋಲಾ ಸಾಮ್ರಾಜ್ಯಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಭಾರತೀಯ ಭದ್ರತಾ ಸಂಸ್ಥೆಗಳ ಮೂಲಗಳು ಸಲೀಂನ ಬಂಧನವನ್ನು ಖಚಿತಪಡಿಸಿವೆ. ಮುಂಬೈ ಪೊಲೀಸರು ದಾಖಲಿಸಿದ ಹಲವು ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಈತನ ವಿರುದ್ಧ ಸಿಬಿಐ (CBI) ಮನವಿಯ ಮೇರೆಗೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಕಳೆದ ಹಲವು ವರ್ಷಗಳಿಂದ ವಿದೇಶದಲ್ಲಿ ಕುಳಿತು ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದ ಈ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಈಗ ಕಾನೂನಿನ ಬಲೆಗೆ ಬಿದ್ದಿದ್ದಾನೆ.
ಯಾರು ಈ ಸಲೀಂ ಡೋಲಾ? ಯಾಕಿಷ್ಟು ಡೇಂಜರಸ್?
ಸಲೀಂ ಡೋಲಾ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಆತ ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಡ್ರಗ್ ಜಾಲದ ಕಿಂಗ್‌ಪಿನ್. ಭಾರತದಾದ್ಯಂತ ರಹಸ್ಯ ಪ್ರಯೋಗಾಲಯಗಳು ಮತ್ತು ಫ್ಯಾಕ್ಟರಿಗಳನ್ನು ನಡೆಸುತ್ತಿದ್ದ ಈತ, ಅಲ್ಲಿ ಸಂಶ್ಲೇಷಿತ (Synthetic Drugs) ಮಾದಕ ವಸ್ತುಗಳನ್ನು ತಯಾರಿಸಿ ವಿದೇಶಗಳಿಗೆ ಸಾಗಿಸುತ್ತಿದ್ದ. ಕೇವಲ ಭಾರತ ಅಷ್ಟೇ ಅಲ್ಲದೆ, ಹಲವಾರು ರಾಷ್ಟ್ರಗಳಲ್ಲಿ ಈತನ ಜಾಲ ಹರಡಿಕೊಂಡಿತ್ತು.
ಮೂಲಗಳ ಪ್ರಕಾರ, ಈತನ ಕಾರ್ಟೆಲ್ ಕೇವಲ ಭಾರತವೊಂದರಲ್ಲೇ ವರ್ಷಕ್ಕೆ ಬರೋಬ್ಬರಿ 5,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಡ್ರಗ್ ವ್ಯವಹಾರ ನಡೆಸುತ್ತಿತ್ತು. ಈ ಹಣದ ಬಹುದೊಡ್ಡ ಪಾಲು ಭೂಗತ ಲೋಕದ ಚಟುವಟಿಕೆಗಳಿಗೆ ಹಾಗೂ ದೇಶವಿರೋಧಿ ಕೃತ್ಯಗಳಿಗೆ ಬಳಕೆಯಾಗುತ್ತಿತ್ತು ಎನ್ನಲಾಗಿದೆ.
ಸಲೀಂ ಮೇಲೆ ಮುಂಬೈ ಪೊಲೀಸರ ಹದ್ದಿನ ಕಣ್ಣು
ದೋಲಾನ ಬಂಧನ ಕಳ್ಳಸಾಗಣೆ ಜಾಲಕ್ಕೆ ನೀಡಿದ ದೊಡ್ಡ ಹೊಡೆತವಾಗಿದ್ದು, ಒಂದು ವೇಳೆ ಆತನನ್ನು ಭಾರತಕ್ಕೆ ಹಸ್ತಾಂತರಿಸಿದರೆ, ಈ ಜಾಲದ ಹಿಂದಿರುವ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರುಗಳು ಬಯಲಿಗೆ ಬರಲಿವೆ ಎಂದು ಮುಂಬೈ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಲೀಂ ಮತ್ತು ಆತನ ಗ್ಯಾಂಗ್ ವಿರುದ್ಧ ಭಾರತದಲ್ಲಿ ಮಾದಕ ವಸ್ತು ಉತ್ಪಾದನೆ, ಕಳ್ಳಸಾಗಣೆ ಮತ್ತು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ, ಅಕ್ರಮವಾಗಿ ಗಳಿಸಿದ ಹಣವನ್ನು ವಿದೇಶಗಳಿಗೆ ವರ್ಗಾಯಿಸುವ ಮನಿ ಲಾಂಡರಿಂಗ್ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯ (ED) ಕೂಡ ತನಿಖೆ ನಡೆಸುತ್ತಿದೆ.
ಕುಟುಂಬಸ್ಥರೂ ಅರೆಸ್ಟ್
ಸಲೀಂ ಡೋಲಾನ ಸಂಕಷ್ಟ ಕಳೆದ ವರ್ಷವೇ ಶುರುವಾಗಿತ್ತು. 2024ರಲ್ಲಿ ಯುಎಇನಲ್ಲಿ ಇಂಟರ್‌ಪೋಲ್ ನೆರವಿನಿಂದ ಈತನ ಮಗ ತಾಹೆರ್ ಡೋಲಾನನ್ನು ಬಂಧಿಸಲಾಗಿತ್ತು. ಕಿರಿಯ ಡೋಲಾನನ್ನು 2025ರ ಜೂನ್‌ನಲ್ಲಿ ಯಶಸ್ವಿಯಾಗಿ ಭಾರತಕ್ಕೆ ಹಸ್ತಾಂತರಿಸುವಲ್ಲಿ ಭಾರತೀಯ ಅಧಿಕಾರಿಗಳು ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಸಲೀಂನ ಬಲಗೈ ಬಂಟನಾಗಿದ್ದ ಸೊಹೈಲ್ ಶೇಖ್‌ನನ್ನು ದುಬೈನಿಂದ ಗಡೀಪಾರು ಮಾಡಿ ಮುಂಬೈ ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದರು.
ಮುಂದಿನ ಹಾದಿ ಸುಲಭವಿಲ್ಲ
ಟರ್ಕಿ ಮತ್ತು ಭಾರತದ ನಡುವೆ ನೇರ ಹಸ್ತಾಂತರ ಒಪ್ಪಂದ ಇಲ್ಲದಿರುವುದು ಸದ್ಯದ ದೊಡ್ಡ ತಲೆನೋವು. ಆದರೂ, ಈತನನ್ನು ಮೊದಲು ಯುಎಇಗೆ (ದುಬೈ) ಕರೆದೊಯ್ದು, ಅಲ್ಲಿಂದ ಭಾರತಕ್ಕೆ ಕರೆತರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಭಾರತೀಯ ತನಿಖಾ ಸಂಸ್ಥೆಗಳು ಈಗಾಗಲೇ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ಆರಂಭಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ,(ಏಜನ್ಸೀಸ್).