ನವದೆಹಲಿ: ಭಾರತ-ಚೀನಾ ಮಧ್ಯೆ ತ್ವೇಷಮಯ ಸ್ಥಿತಿ ಮುಂದುವರಿದಿರುವಂತೆಯೇ ಮಂಗಳವಾರ ಭಾರತದ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರ ಜತೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದರು.
ರಕ್ಷಣಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರೂ ಈ ಸಭೆಯಲ್ಲಿ ಇದ್ದರು. ಚೀನಾದ ಸಂಭಾವ್ಯ ಗಡಿ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಥತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.
ಕಳೆದ ಕೆಲವು ದಿನಗಳಿಂದ ಗಡಿಯಲ್ಲಿ ಚೀನಾ ಸೈನಿಕರು ನಡೆಸುತ್ತಿರುವ ಕವಾಯತು, ತಾಲೀಮು ಮತ್ತು ಪೂರ್ವ ಲಡಾಖ್‌ನಲ್ಲಿ ಈಗಿರುವ ಸ್ಥಿತಿಗತಿ ಕುರಿತು ರಕ್ಷಣಾ ಪಡೆ ಮುಖ್ಯಸ್ಥರು ಪ್ರಧಾನಿಗೆ ವಿವರವಾದ ವರದಿ ಸಲ್ಲಿಸಿದರೆಂದು ಹೇಳಲಾಗಿದೆ.
ಇದಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನೂ ಈ ಪಡೆಗಳ ಮುಖ್ಯಸ್ಥರು ಭೇಟಿ ಮಾಡಿ ಮಾಹಿತಿ ನೀಡಿದ್ದರು. ಸಿಕ್ಕಿಂ ಮತ್ತು ಲಡಾಖ್‌ನಲ್ಲಿ ಚೀನಾ ತನ್ನ ಸೇನಾ ಜಮಾವಣೆಯನ್ನು ದಿನೇದಿನೆ ಹೆಚ್ಚಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಸಭೆಗಳು ಮಹತ್ವ ಪಡೆದಿವೆ.