ನ್ಯೂಸ್

ಒಡಿಶಾ-ಜಾರ್ಖಂಡ್ ಗಡಿಯಲ್ಲಿ ಐಇಡಿ ಸ್ಫೋಟ; ರೈಲ್ವೆ ಸಿಬ್ಬಂದಿ ಸಾವು| ied-blast

ಭುವನೇಶ್ವರ: ಸುಂದರ್‌ಗಢ ಜಿಲ್ಲೆಯ ಒಡಿಶಾ-ಜಾರ್ಖಂಡ್ ಗಡಿ ಬಳಿಯ ರೈಲ್ವೆ ಹಳಿಯಲ್ಲಿ ಸಂಭವಿಸಿದ ಐಇಡಿ ಸ್ಫೋಟದಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಹಳಿಯಲ್ಲಿ ಮಾವೋವಾದಿಗಳು ಹೂತಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಬಿಮ್ಲಗಢ ವಿಭಾಗದ ಕರಂಪಡ ಮತ್ತು ರೆಂಜ್ಡಾವನ್ನು ಸಂಪರ್ಕಿಸುವ ರೈಲ್ವೆ ಹಳಿಗಳಲ್ಲಿ ಈ ಸ್ಫೋಟ ಸಂಭವಿಸಿದೆ. ಹಳಿಗೆ ಸಣ್ಣಪುಟ್ಟ ಹಾನಿಯಾಗಿದ್ದು, ಆದಾಗ್ಯೂ ಇದು ಲೂಪ್ ಲೈನ್ ಆಗಿರುವುದರಿಂದ ಪ್ರಯಾಣಿಕ ರೈಲಿನ ಚಲನೆಗೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಆಗ್ನೇಯ ರೈಲ್ವೆಯ ವಕ್ತಾರರು ಮಾಹಿತಿ ನೀಡಿದ್ದಾರೆ. ಜುಲೈ 28ರಿಂದ ಆಗಸ್ಟ್ 3ರವರೆಗೆ 'ಹುತಾತ್ಮರ ಸಪ್ತಾಹ'ವನ್ನು ಆಚರಿಸಲು ಮಾವೋವಾದಿಗಳು ಕರೆ ನೀಡಿದ್ದರು ಎಂದು ತಿಳಿದುಬಂದಿದೆ.

ಮೃತ ವ್ಯಕ್ತಿಯನ್ನು ಇಟುವಾ ಓರಂ ಎಂದು ಗುರುತಿಸಲಾಗಿದ್ದು, ಅವರು ಭಾರತೀಯ ರೈಲ್ವೆಯಲ್ಲಿ 'ಕೀ ಮ್ಯಾನ್' ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಂದರ್‌ಗಢ ಜಿಲ್ಲೆಯ ಸ್ಫೋಟ ಸ್ಥಳದ ಬಳಿ ಮಾವೋವಾದಿ ಪೋಸ್ಟರ್‌ಗಳು ಕಂಡುಬಂದಿದ್ದರಿಂದ ಪೊಲೀಸರು ಸ್ಫೋಟದಲ್ಲಿ ಮಾವೋವಾದಿಗಳ ಕೈವಾಡವಿದೆ ಎಂದು ಶಂಕಿಸಿದ್ದಾರೆ.

(ಏಜೆನ್ಸೀಸ್)

ಇನ್ನೂ ಈ ಬಗ್ಗೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಸ್ಫೋಟದಲ್ಲಿ ರೈಲ್ವೆ ಸಿಬ್ಬಂದಿ ಸಾವನ್ನಪ್ಪಿದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಮತ್ತು ಅವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ (CMRF) ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿಗಳ ಕಚೇರಿ (CMO) X ನ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.