

ಮಾಸ್ಕೋ; ಇಂದು (ಆ.03) ರಷ್ಯಾದ ಕಮ್ಚಟ್ಕಾ ಪ್ರದೆಶದ ಬಳಿಕ ಕುರಿಲ್ ದ್ವೀಪಗಳಲ್ಲಿ 7 ತೀವ್ರತೆಯ ಭೂಕಂಪ ಸಂಭವಿಸಿದೆ. ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ 8.8 ತೀವ್ರತೆಯ ಭೂಕಂಪ ಸಂಭವಿಸಿದ ಕೆಲವು ದಿನಗಳ ಸಮೀಪದಲ್ಲೇ ಭಾರೀ ಪ್ರಮಾಣದದಲ್ಲಿ ಈ ಭೂಕಂಪ ಸಂಭವಿಸಿದೆ.
ಇದರಿಂದ ಮತ್ತೊಮ್ಮೆ ಸುನಾಮಿ ಅಲೆಗಳು ಏಳುವ ಅಪಾಯ ಎದುರಾಗಿದ್ದು, ರಷ್ಯಾದ ಪೂರ್ವ ಕಮ್ಚಟ್ಕಾ ಪರ್ಯಾಯ ದ್ವೀಪದ ಮೂರು ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ತುರ್ತು ಸೇವೆಗಳ ಸಚಿವಾಲಯ ಇಂದು ಮಾಹಿತಿ ನೀಡಿದೆ. ನಿರೀಕ್ಷಿತ ಅಲೆಗಳ ಎತ್ತರ ಕಡಿಮೆಯಾಗಿದೆ, ಆದರೆ ನೀವು ತೀರದಿಂದ ದೂರ ಸರಿಯಬೇಕು ಎಂದು ಸಚಿವಾಲಯ ಇಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಣೆ ಹೊರಡಿಸಿದೆ.
ಪೆಸಿಫಿಕ್ ಸುನಾಮಿ ಎಚ್ಚರಿಕೆ ವ್ಯವಸ್ಥೆ ಮತ್ತು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಎರಡೂ ಕಂಪನದ ಶಕ್ತಿಯನ್ನು ದೃಢಪಡಿಸಿವೆ. ಈ ಘಟನೆಯು ಈ ವಾರದ ಆರಂಭದಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಸಂಬಂಧಿಸಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ. ಭೂಕಂಪದಿಂದಾಗಿ ಈ ಪ್ರದೇಶದಲ್ಲಿ 600 ವರ್ಷಗಳಲ್ಲಿ ಮೊದಲ ಬಾರಿ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂದು ಆರ್‌ಐಎ ಸ್ಟೇಟ್ ನ್ಯೂಸ್ ವರದಿ ಮಾಡಿದೆ. ಮುಂದಿನ ಕೆಲವು ವಾರಗಳಲ್ಲಿ ಕುರಿಲ್ ದ್ವೀಪಗಳಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಕೆಯನ್ನು ಸಹ ನೀಡಿದ್ದರು.
(ಏಜೆನ್ಸೀಸ್)
ಕಳೆದ ವಾರ ಸಂಭವಿಸಿದ ಭೂಕಂಪದಿಂದ ಫ್ರೆಂಚ್ ಪಾಲಿನೇಷ್ಯಾ ಮತ್ತು ಚಿಲಿಯಷ್ಟು ದೂರದಲ್ಲಿ ಸುನಾಮಿ ಎಚ್ಚರಿಕೆಗಳನ್ನು ಪ್ರಚೋದಿಸಿತು. ಜುಲೈ 30 ರಂದು ಮೊದಲ ಬಾರಿಗೆ, ಈ ಪ್ರದೇಶದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತು, ನಂತರ ಹಲವಾರು ಬಲವಾದ ನಂತರದ ಕಂಪನಗಳು ಸಂಭವಿಸಿದ್ದವು. ಬಳಿಕ ರಷ್ಯಾ ಸೇರಿದಂತೆ ಜಪಾನ್, ಹವಾಯಿ ದ್ವೀಪಗಳು, ಅಮೆರಿಕ ಹಾಗೂ ಫೆಸಿಫಿಕ್ ಸಾಗರದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು.