Sai Pallavi: ಚಂದೂ ಮೊಂಡೆಟಿ ನಿರ್ದೇಶಿಸಿರುವ ಹಾಗೂ ತೆಲುಗು ನಟ ನಾಗ ಚೈತನ್ಯ ಮತ್ತು ನಟಿ ಸಾಯಿ ಪಲ್ಲವಿ ನಟಿಸಿರುವ ಬಹುನಿರೀಕ್ಷಿತ ‘ಥಾಂಡೆಲ್’ ಸಿನಿಮಾ ಇದೇ ಫೆ.07ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡು, ಇದೀಗ ಯಶಸ್ವಿಯಾಗಿ ಹೊರಹೊಮ್ಮಿದೆ. ಬನ್ನಿ ವಾಸು ಮತ್ತು ಅಲ್ಲು ಅರವಿಂದ್ ಸಹಯೋಗದಲ್ಲಿ ನಿರ್ಮಿಸಲಾದ ಚಿತ್ರದಲ್ಲಿ ಸಾಯಿ ಪಲ್ಲವಿ-ನಾಗಚೈತನ್ಯ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಸದ್ಯ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಾಣುತ್ತಿರುವ ಥಾಂಡೆಲ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರಮಂದಿಗಳಲ್ಲಿ ತನ್ನ ಪ್ರದರ್ಶನವನ್ನು ಮುಂದುವರಿಸಿದೆ.
ಪ್ರೇಮಂ ಚಿತ್ರದ ಮೂಲಕ ತೆಲುಗು ಸಿನಿರಸಿಕರ ಮನಗೆದ್ದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ, ಮಲರ್ ಪಾತ್ರದಿಂದ ಇಂದಿನ ಸತ್ಯ ಪಾತ್ರದವರೆಗೂ ಅಭಿಮಾನಿಗಳ ಮನಸೂರೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೇಕಪ್ ಇಲ್ಲದ ಮುಖ, ಸಿಂಪಲ್ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ, ಇದೀಗ ಮತ್ತೊಮ್ಮೆ ಥಾಂಡೆಲ್ ಮೂಲಕ ನೋಡುಗರ ಗಮನ ಸೆಳೆದಿದ್ದಾರೆ. ಯಾವುದೇ ಸಂದರ್ಶನವಿದ್ದರೂ ಬಹಳ ಸೂಕ್ಷ್ಮವಾಗಿ ಮಾತನಾಡುವ ಸಾಯಿ ಪಲ್ಲವಿ, ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ಥಾಂಡೆಲ್ ಸಕ್ಸಸ್ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಸಾಯಿ ಪಲ್ಲವಿ, ಅತ್ಯುತ್ತಮ ನಟಿಗೆ ರಾಷ್ಟ್ರ ಪ್ರಶಸ್ತಿ ಪಡೆಯಬೇಕು ಎಂಬ ಹಂಬಲವಿದೆ. 21ನೇ ವಯಸ್ಸಿನಲ್ಲಿ ನನಗೆ ನನ್ನಮ್ಮ ಅಜ್ಜಿ ಉಡುತ್ತಿದ್ದ ಸೀರೆಯೊಂದನ್ನು ನನ್ನ ಕೈಗೆ ಕೊಟ್ಟರು. ಇದನ್ನು ನೀನು ನಿನ್ನ ಮದುವೆಯಲ್ಲಿ ತೊಡಬೇಕು ಎಂದು ಹೇಳಿದ್ರು. ಆಗ ನಾನಿನ್ನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಅಮ್ಮನ ಮಾತಿನ ಪ್ರಕಾರ, ಮದುವೆ ಸಮಯಕ್ಕೆ ಆ ಸೀರೆಯನ್ನು ನಾನು ತೊಡಬೇಕಿತ್ತು. ಆದರೆ, ಈಗ ಅದು ಬದಲಾಗಿದೆ ಎಂದರು.
ಇದನ್ನೂ ಓದಿ:IPL 2025: ಮಾ. 22ಕ್ಕೆ ಕೆಕೆಆರ್-ಆರ್ಸಿಬಿ ಉದ್ಘಾಟನಾ ಪಂದ್ಯ: ಮೇ3ಕ್ಕೆ ಬೆಂಗಳೂರಿನಲ್ಲಿ ಆರ್ಸಿಬಿ-ಸಿಎಸ್ಕೆ
ಅಮ್ಮ ಹೀಗೆ ಹೇಳಿ ಮೂರು ವರ್ಷಗಳ ಬಳಿಕ ನಾನು ಚಿತ್ರರಂಗಕ್ಕೆ ಪ್ರೇಮಂ ಮೂಲಕ ಪದಾರ್ಪಣೆ ಮಾಡಿದೆ. ಉದ್ಯಮಕ್ಕೆ ಕಾಲಿಟ್ಟ ಕೆಲವು ವರ್ಷಗಳ ನಂತರ ನನಗೆ ಅನಿಸಿದ್ದು, ಇಂದಲ್ಲ ನಾಳೆ ನಾನು ಅತ್ಯುತ್ತಮ ನಟಿಗೆ ರಾಷ್ಟ್ರ ಪ್ರಶಸ್ತಿ ಪಡೆಯುತ್ತೇನೆ ಎಂದು. ಈ ನಂಬಿಕೆ ಇಂದಿಗೂ ನನ್ನಲ್ಲಿ ಆಳವಾಗಿ ಬೇರೂರಿದೆ. ನನಗೆ ಯಾವತ್ತು ಈ ಪ್ರಶಸ್ತಿ ಒಲಿದು ಬರುತ್ತದೆಯೋ ಅಂದೇ ಅಮ್ಮ ಕೊಟ್ಟ ಸೀರೆಯನ್ನು ಧರಿಸಿ, ವೇದಿಕೆಗೆ ಕಾಲಿಡ್ತೀನಿ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ,(ಏಜೆನ್ಸೀಸ್).