ಬೆಂಗಳೂರು: ಇಶಾ ಫೌಂಡೇಶನ್ ಸಂಸ್ಥಾಪಕ ಮತ್ತು ಆಧ್ಯಾತ್ಮಿಕ ಶಿಕ್ಷಕರಾದ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದೇ ತಿಂಗಳ 17ರಂದು ದೆಹಲಿಯ ಇಂದ್ರಪ್ರಸ್ಥ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸದ್ಗುರು ಅವರನ್ನು ಈಗ ವೆಂಟಿಲೇಟರ್‌ಗೆ ಸ್ಥಳಾಂತರಿಸಿದ್ದು, ಸದ್ಯ ಅವರ ಸ್ಥಿತಿ ಚೇತರಿಕೆಗೊಂಡಿದೆ. ಸದ್ಗುರು ಪರಿಸ್ಥಿತಿ ಕಂಡ ಬಾಲಿವುಡ್ ನಟಿ ಕಂಗನಾ ರಣಾವತ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಹಡೀಲು ಗದ್ದೆಗಳಲ್ಲಿ ಹಸಿರುಕ್ರಾಂತಿ: ಬೈಲುಪೇಟೆಯಲ್ಲಿ ತರಕಾರಿ ಜತೆಗೆ ಭತ್ತ ಬೇಸಾಯ: 30 ಎಕರೆಯಲ್ಲಿ ಕೃಷಿ
ಸದ್ಗುರುಗಳ ಕಟ್ಟಾ ಅನುಯಾಯಿಯಾದ ನಟಿ ಕಂಗನಾ ರಣಾವತ್ ಇತ್ತೀಚೆಗಷ್ಟೇ ಮಿದುಳಿನ ಶಸ್ತ್ರಕ್ರಿಯೆಗೆ ಅವರು ಒಳಗಾಗಿದ್ದರಿಂದ ಪದಗಳಲ್ಲಿ ವಿವರಿಸಲಾಗದಷ್ಟು ಆಘಾತವಾಗಿದೆ ಎಂದು ಬರೆದುಕೊಂಡಿದ್ದಾರೆ. "ಇಂದು ನಾನು ಸದ್ಗುರು ಅವರನ್ನು ಐಸಿಯು ಹಾಸಿಗೆಯ ಮೇಲೆ ಮಲಗಿರುವುದನ್ನು ನೋಡಿದಾಗ ಇದ್ದಕ್ಕಿದ್ದಂತೆ ಗಾಬರಿಯಾಯಿತು. ಅವರು ಸಹ ನಮ್ಮಂತೆ ಮೂಳೆ, ರಕ್ತ, ಮಾಂಸ ಹೊಂದಿದ್ದಾರೆ ಎಂಬುದನ್ನು ತಿಳಿದು ನಿಜಕ್ಕೂ ಆಶ್ಚರ್ಯ ಉಂಟಾಯಿತು" ಎಂದಿದ್ದಾರೆ.
"ದೇವರೇ ಕುಸಿದು ಹೋದನೆಂದು ಭಾವಿಸಿದೆ. ಭೂಮಿ ಪಲ್ಲಟಗೊಂಡಿದೆ, ಆಕಾಶವು ನನ್ನ ಕೈಬಿಟ್ಟಿದೆ ಎಂದು ಭಾವಿಸುತ್ತ ಈ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇಂದು ಲಕ್ಷಾಂತರ ಜನರು (ಭಕ್ತರು) ನನ್ನಂತೆಯೇ ದುಃಖವನ್ನು ಹಂಚಿಕೊಳ್ಳುತ್ತಾರೆ. ನನ್ನ ನೋವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಸಹ ಬಯಸುತ್ತೇನೆ. ಈ ಸಂಕಟವನ್ನು ತಡೆದುಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ,(ಏಜೆನ್ಸೀಸ್).