

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಆದ್ಯತೆ ಸಿಗುತ್ತಿಲ್ಲ ಎಂಬ ಮಾತು ಆಗಾಗಾ ಚಂದನವನದಲ್ಲಿ ಗೂಂಜಿಸುತ್ತಲೇ ಇರುತ್ತದೆ. ಆದರೆ, ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಅನೇಕರು ಕಾಯುತ್ತಲೇ ಇದ್ದಾರೆ. ಹೊಸ ನಿರ್ದೇಶಕರು ನಿರ್ಮಾಪಕರು ಹೊಸ ಬಗೆಯ ಸಿನಿಮಾಗಳನ್ನು ಮಾಡಿದರೆ ಜನರು ಕೈ ಹಿಡಿಯುತ್ತಾರೆ ಎಂಬ ಆಸೆಯಿಂದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಎರಡು ವರ್ಷಗಳ ಹಿಂದೆ ʼಕೆಜಿಎಫ್ʼ, ʼಕಾಂತಾರʼ ಚಿತ್ರಗಳಂತೆ ಇಡೀ ದೇಶ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂಥ ಸಿನಿಮಾಗಳನ್ನು ನೀಡು ಹಂಬಲ ಒಂದೆಡೆಯಾದರೆ ಇನ್ನೊಂದೆಡೆ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳೇ ಸಿಗದಿರುವ ದುರದೃಷ್ಟ ಇನ್ನೊಂದೆಡೆ.
ಪ್ರಚಾರ ಚೆನ್ನಾಗಿದೆ. ಸಿನಿಮಾ ನಿರೀಕ್ಷೆ ಮೂಡಿಸಿದೆ. ಆದರೂ ಚಿತ್ರಮಂದಿರಗಳಲ್ಲಿ ಜನ ಕಾಣಿಸುತ್ತಿಲ್ಲ ಎಂಬ ಮಾತೂ ಅಲ್ಲಲ್ಲಿ ಕೇಳಬಹುದು. ಅದಕ್ಕೆ ಇನ್ನೊಂದು ಕಾರಣ ಒಟಿಟಿ ಕಡೆಗಿನ ಒಲವು. ಪ್ರೇಕ್ಷಕ ಎಂದಿಗೂ ಬುದ್ಧಿವಂತ. 200-300 ರೂ. ಖರ್ಚು ಮಾಡಿ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡುವಷ್ಟು ಚೆನ್ನಾಗಿದೆ ಎಂದು ಆವರಿಗೆ ಅನಿಸಿದರೆ ಮಾತ್ರ ಚಿತ್ರಮಂದಿರಕ್ಕೆ ಹೋಗುತ್ತಾರೆ. ಇಲ್ಲದಿದ್ದರೆ ಒಟಿಟಿಗೆ ಹೇಗೂ ಬರುತ್ತದೆ, ಆಗ ನೋಡಿದರಾಯಿತು ಎಂದು ಸುಮ್ಮನಾಗುತ್ತಾರೆ. ಒಟಿಟಿಗಳಲ್ಲಿ ಪ್ರೇಕ್ಷಕರಿಗೆ ಆಯ್ಕೆಗಳು ಜಾಸ್ತಿ ಇವೆ. ತಮಗೆ ಬೇಕಾದ ಜಾನರ್ ಚಿತ್ರವನ್ನು, ಬೇಕಾದ ಹೊತ್ತಿನಲ್ಲಿ, ಅನುಕೂಲ ಇದ್ದಾಗ ನೋಡುವ ಅವಕಾಶವಿದೆ. ಆದರೆ, ದುರಂತ ಎಂದರೆ ಒಟಿಟಿ ವೇದಿಕೆಗಳು ಎಲ್ಲ ಕನ್ನಡ ಚಿತ್ರಗಳನ್ನು ಸ್ವೀಕರಿಸುವುದಿಲ್ಲ. ಒಟಿಟಿಗೆ ಹೋಗುವ ಮುನ್ನ ಥಿಯೇಟರ್‌ಗಳಲ್ಲಿ ಕನಿಷ್ಠ ಇಷ್ಟು ದಿನ ಓಡಿರಬೇಕು ಎಂಬ ಕಂಡೀಷನ್ ಕೂಡ ಇರುತ್ತದೆ. ಇವೆಲ್ಲದರ ಜತೆಗೆ ಕೆಲವು ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡಿದರೆ ಆಗುವ ಅನುಭವವೇ ಬೇರೆ! ಅಲ್ಲಿನ ಸೌಂಡ್ ಎಫೆಕ್ಟ್ಸ್, ದೊಡ್ಡ ಪರದೆಯಲ್ಲಿ ಕಾಣುವ ಸೂಕ್ಷ್ಮ ಅಂಶಗಳು ಮೊಬೈಲ್ನಲ್ಲಿ ಸಿಗುವುದಿಲ್ಲ. ಇದರೊಂದಿಗೆ ಥಿಯೇಟರ್‌ನಲ್ಲಿ ಸಿನಿಮಾ ನೋಡುವ ಅನುಭವಕ್ಕೆ ಒಟಿಟಿ ಸರಿಸಾಟಿಯಲ್ಲ.
ಮೊದಲ ವಾರದಿಂದ ಎರಡನೇ ವಾರಕ್ಕೆ 8 ಶೋಗಳಿಂದ 28ಕ್ಕೆ ಏರಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಂಡ ಚಿತ್ರತಂಡಗಳು ಇವೆರಡು. ಆದರೆ, ಪ್ರಚಾರ ಮಾತ್ರ ಕೆಲಸ ಮಾಡಿದ್ದಲ್ಲ. ಚಿತ್ರದಲ್ಲಿರುವ ಕಂಟೆಂಟ್ ಹಾಗೂ ಮೇಕಿಂಗ್ ಕೂಡ ಸಾಥ್ ನೀಡಿದ್ದಕ್ಕೆ ಮಾತ್ರವೇ ಜನರಿಂದ ಮೆಚ್ಚುಗೆ ಪಡೆದುಕೊಳ್ಳಲು ಸಾಧ್ಯವಾಯಿತು. ಸೀಮಿತ ಬೆಜೆಟ್‌ನಲ್ಲಿ ಉತ್ತಮ ಕಂಟೆಂಟ್ ಹಾಗೂ ಕ್ವಾಲಿಟಿ ಚಿತ್ರವನ್ನು ಮಾಡುವುದರ ಜತೆಗೆ ಜನರನ್ನು ಚಿತ್ರಮಂದಿರಗಳಿಗೆ ಕರೆತರಲು ಸಮರ್ಪಕವಾದ ಪ್ರಚಾರ ಕೂಡ ಮುಖ್ಯವಾಗುತ್ತದೆ. ಥಿಯೇಟರ್‌ನಲ್ಲಿ ಸಿನಿಮಾ ಉಳಿಸಿಕೊಳ್ಳುವುದು ದೊಡ್ಡ ಸವಾಲು ಎಂಬಂತಾಗಿರುವುದಂತೂ ಹೌದು.
ಈ ಥಿಯೇಟರ್ ಸಮಸ್ಯೆ ಇವತ್ತು ನೆನ್ನೆಯ ತೊಂದರೆಯಲ್ಲ. ಕನ್ನಡ ಚಿತ್ರರಂಗಕ್ಕೆ ಹಲವಾರು ವರ್ಷಗಳಿಂದ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ನಮ್ಮ ನೆರೆಯ ರಾಜ್ಯಗಳಲ್ಲಿ ಸ್ಥಳೀಯ ಚಿತ್ರಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಅದಕ್ಕೆ ಪ್ರೇಕ್ಷಕರು ಕೂಡ ಸ್ಪಂದಿಸುತ್ತಾರೆ. ಆದರೆ ನಮ್ಮಲ್ಲಿ ಇದು ಉಲ್ಟಾ. ಮೊದಲು ಅನ್ಯ ಭಾಷೆಯ ಸಿನಿಮಾಗೆ ಚಿತ್ರಮಂದಿರವನ್ನು ನೀಡುತ್ತಾರೆ. ಅದು ಹೆಚ್ಚು ಸದ್ದು ಮಾಡುತ್ತಿಲ್ಲವೆಂದರೆ ಮಾತ್ರ ಕನ್ನಡ ಚಿತ್ರಕ್ಕೆ ಸ್ಥಳ ಮಾಡಿಕೊಡುತ್ತಾರೆ.
ನಮ್ಮ ಚಿತ್ರ ಕಮರ್ಷಿಯಲ್ ಆಗಿ ಸದ್ದು ಮಾಡುತ್ತಿದ್ದರೆ ಮಾತ್ರ. ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಬೇಕು ಆಗ ಚಿತ್ರರಂಗಕ್ಕೆ ಲಾಭವಾಗುತ್ತದೆ ಆದರೆ ಎಲ್ಲವನ್ನೂ ಹಣದಿಂದ ಅಳೆದರೆ ವಿಭಿನ್ನ ಪ್ರಯತ್ನಗಳಿಗೆ ಜಾಗವಿರುವುದಿಲ್ಲ. ಹಾಗಾಗಿ ಒಂದು ನಿಯಮಬದ್ಧವಾದ ವ್ಯವಸ್ಥೆಯ ಅಗತ್ಯವಿದೆ. ಪರಭಾಷೆ ಸಿನಿಮಾಗಳು ಬರಲಿ ಒಳ್ಳೆಯ ಯಶಸ್ಸೂ ಸಿಗಲಿ. ಆದರೆ ಪ್ರೇಕ್ಷಕರು ಮತ್ತು ಉದ್ಯಮದವರು ನಮ್ಮ ಕನ್ನಡ ಚಿತ್ರಗಳನ್ನು ಮೊದಲು ಪರಿಗಣಿಸಿದಾಗ ಮಾತ್ರ ಕಲೆ ಬೆಳೆಯುತ್ತದೆ ಮತ್ತು ಉಳಿಯುತ್ತದೆ.