More

    ಬಿಜೆಪಿಯೊಂದಿಗಿನ ಮೈತ್ರಿ ಜೆಡಿಎಸ್‌ಗೆ ದುಬಾರಿ: ಕಾರಣ ವಿವರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ…!

    ಮಂಡ್ಯ: ಜೆಡಿಎಸ್ ವಿರುದ್ಧ ಬಿಜೆಪಿಯ ಉದಾಸೀನತೆ ಮೈತ್ರಿಯ ಆರಂಭದಲ್ಲೇ ವ್ಯಕ್ತವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಜೆಡಿಎಸ್‌ನ ಯಾವ ನಾಯಕರನ್ನು ಆಹ್ವಾನಿಸಿಲ್ಲ. ಮಾತ್ರವಲ್ಲದೆ ಎರಡು ಸ್ಥಾನಕ್ಕೆ ಮೈತ್ರಿ ಅಗತ್ಯವಿತ್ತೇ ಎಂಬ ಅಪಸ್ವರ, ಮಂಡ್ಯ ಮತ್ತು ಹಾಸನ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ವರಿಷ್ಠರ ಹಸ್ತಕ್ಷೇಪ ಜೆಡಿಎಸ್‌ಗೆ ದುಬಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
    ನಗರದ ಬಂದೀಗೌಡ ಬಡಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ರಾಜಕಾರಣದ ಗೊಂದಲ ಜೆಡಿಎಸ್‌ಗೆ ಹೊಸ ಅನುಭವವಾಗಿದೆ. ಇದರ ಪರಿಣಾಮ ಏನೆಂದು ಭವಿಷ್ಯದಲ್ಲಿ ಗೋಚರವಾಗಲಿದೆ ಎಂದು ಹೇಳಿದರು.
    ಕಾಂಗ್ರೆಸ್ ಪಕ್ಷ ಜೆಡಿಎಸ್ ವರಿಷ್ಠರಿಗೆ ಅಗ್ರ ಗೌರವ ನೀಡಿದೆ. ದೇವೇಗೌಡರಿಗೆ ಪ್ರಧಾನಿ ಹುದ್ದೆ, ಎಚ್.ಡಿ.ಕುಮಾರಸ್ವಾಮಿ ಅವರಿಗೆ 2 ಬಾರಿ ಮುಖ್ಯಮಂತ್ರಿ ಹುದ್ದೆ ನೀಡುವ ಜತೆಗೆ 2004ರಲ್ಲಿ ಅತಂತ್ರ ಫಲಿತಾಂಶ ಸಿಕ್ಕಾಗ ಎಸ್.ಎಂ.ಕೃಷ್ಣ ಮತ್ತು ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸುಮ್ಮನಿರಿಸಿ, ದೇವೇಗೌಡರ ಮಾತಿಗೆ ಗೌರವ ನೀಡಿ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತರಲಾಯಿತು. ಆದರೂ ಕುಮಾರಸ್ವಾಮಿ ಕಾಂಗ್ರೆಸ್ ಬಗ್ಗೆ ಅನೇಕ ಬಾರಿ ಲಘುವಾಗಿ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
    2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯನ್ನು ವಿರೋಧಿಸಿದ ಕಾರ್ಯಕರ್ತರ ಬೆಂಬಲಕ್ಕೆ ನಿಂತ ಜಿಲ್ಲೆಯ ಮುಖಂಡರ ವಿರುದ್ಧ ಡಿ.ಕೆ.ಶಿವಕುಮಾರ್ ಕ್ರಮಕ್ಕೆ ಮುಂದಾಗಿದ್ದರು. ಆದಾಗ್ಯೂ ಅವರ ನಿಷ್ಠೆ ನೆನೆಯದೇ ವಿಷವಿಕ್ಕಿದ್ದಾರೆಂಬ ಆರೋಪ ಮಾಡಿರುವುದು ಕುಮಾರಸ್ವಾಮಿ ವ್ಯಕ್ತಿತ್ವಕ್ಕೆ ಸರಿ ಹೊಂದುವುದಿಲ್ಲ. ಬಿಜೆಪಿಯೊಂದಿಗಿನ ಮೈತ್ರಿ ಗೊಂದಲದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ನೋವಿನಿಂದ ಪ್ರತಿಕ್ರಿಯೆ ಹೊರ ಹಾಕಿರುವುದು ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಈ ಹಿಂದೆ 7 ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿತ್ತು. ಆದರೆ ಪ್ರಸ್ತುತ ಬಿಜೆಪಿ ದೇವೇಗೌಡರ ಅಳಿಯ ಡಾ.ಮಂಜುನಾಥ್ ಸೇರಿ ಮೂರ‌್ನಾಲ್ಕು ಸ್ಥಾನ ನೀಡಿರುವುದು ಸರಿಯೇ ಎಂದು ವ್ಯಂಗ್ಯವಾಡಿದರು.
    ಬಿಜೆಪಿ ವರಿಷ್ಠರಿಂದ ರಾಜ್ಯದ ಪ್ರಬಲ ಸಮುದಾಯವಾದ ಒಕ್ಕಲಿಗರಿಗೆ ಅನ್ಯಾಯವಾಗಿದೆ. ಹಳೇ ಮೈಸೂರು ಭಾಗದ 13 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ 2 ಸ್ಥಾನಗಳಲ್ಲಿ ಅವಕಾಶ ನೀಡಿದೆ. ಈ ಮೂಲಕ ಸದಾನಂದಗೌಡ, ಪ್ರತಾಪ್‌ಸಿಂಹ, ಸಿ.ಟಿ.ರವಿ ಅವರಿಗೆ ಅವಕಾಶ ನೀಡದಿರುವುದು ಪ್ರಬಲ ಜನಾಂಗಕ್ಕೆ ಮಾಡಿದ ಅನ್ಯಾಯವಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಐದಾರು ಜನರಿಗೆ ಅವಕಾಶ ಕಲ್ಪಿಸಿದೆ ಎಂದರು.
    ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ರಾಜ್ಯದ 28 ಕ್ಷೇತ್ರದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ. ಈ ಪೈಕಿ ಕನಿಷ್ಟ 20 ಕ್ಷೇತ್ರಗಳ ಗೆಲುವು ಖಚಿತ. ಜಿಲ್ಲೆಯ ಸಮಸ್ಯೆಗಳು, ಅವುಗಳಿಗೆ ಸ್ಪಂದಿಸುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಕಾರ್ಯವೈಖರಿ, ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ರದ್ಧತಿ ಹಾಗೂ ಬೆಳೆಗಳಿಗೆ ಎಂಎಸ್‌ಪಿ ಜಾರಿಯಂತಹ ಸಾಮಾಜಿಕ ಹೊಣೆಗಾರಿಕೆಯ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಬದ್ಧವಾಗಿದೆ. ಸ್ಥಳೀಯ ಜನರೊಟ್ಟಿಗೆ ಬೆರೆಯಲು ಪಕ್ಷದ ಅಭ್ಯರ್ಥಿ ಸಮರ್ಥರಿದ್ದು, ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದ ಅವರು, ಎದುರಾಳಿ ಸ್ಥಳೀಯ ಅಥವಾ ಗೌಡರ ಕುಟುಂಬದ ಅಭ್ಯರ್ಥಿಯಾದರೂ ಚಿಂತೆಯಿಲ್ಲ. ನಮ್ಮ ಯೋಜನೆಗಳ ಪರಿಣಾಮ ನಮ್ಮ ಅಭ್ಯರ್ಥಿಗೆ ವರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ದಿನೇಶ್ ಗೂಳಿಗೌಡ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಎಚ್.ಬಿ.ರಾಮು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಖಂಡರಾದ ವಿಜಯ್ ರಾಮೇಗೌಡ, ರವಿ ಭೋಜೇಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯ್‌ಕುಮಾರ್ ಇತರರಿದ್ದರು.

    ಬಿಜೆಪಿಯೊಂದಿಗಿನ ಮೈತ್ರಿ ಜೆಡಿಎಸ್‌ಗೆ ದುಬಾರಿ: ಕಾರಣ ವಿವರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ...!

    ಜನರ ವಿಶ್ವಾಸ ಗಳಿಸುತ್ತೇನೆ
    ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಗರದ ಬಂದೀಗೌಡ ಬಡಾವಣೆಯಲ್ಲಿ ಮನೆಯನ್ನು ಖರೀದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೃಹ ಕಚೇರಿ ಉದ್ಘಾಟನೆ ಹಾಗೂ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ರಾಷ್ಟ್ರ ಹಾಗೂ ರಾಜ್ಯದ ನಾಯಕರು ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರ ಧನ್ಯವಾದ ಅರ್ಪಿಸುತ್ತೇನೆ. ಈಗಾಗಲೇ ಜಿಲ್ಲಾದ್ಯಂತ ಪ್ರವಾಸ ನಡೆಸಿದ್ದು, ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ಸಿಯಾಗುತ್ತೇನೆಂಬ ಭರವಸೆ ವ್ಯಕ್ತಪಡಿಸಿದರು.
    ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಜಿಲ್ಲೆಯ ಅಭ್ಯುದಯಕ್ಕಾಗಿ ಉತ್ತಮ ಯೋಜನೆಗಳನ್ನು ಸಾಕಾರಗೊಳಿಸಲು ರಾಜ್ಯದ ಆಯ-ವ್ಯಯ ಪೂರಕವಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯವಾಗಿದ್ದು, ಅಭ್ಯರ್ಥಿ ಗೆಲುವಿಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts