More

    ಹಡೀಲು ಗದ್ದೆಗಳಲ್ಲಿ ಹಸಿರುಕ್ರಾಂತಿ: ಬೈಲುಪೇಟೆಯಲ್ಲಿ ತರಕಾರಿ ಜತೆಗೆ ಭತ್ತ ಬೇಸಾಯ: 30 ಎಕರೆಯಲ್ಲಿ ಕೃಷಿ

    ಧನಂಜಯ ಗುರುಪುರ

    ಕೆಲವು ವರ್ಷದಿಂದ ಹಡೀಲು ಬಿದ್ದಿದ್ದ ಏತಮೊಗರು-ಬೈಲುಪೇಟೆಯ ಸುಮಾರು 30 ಎಕರೆ ಗದ್ದೆ ಪ್ರದೇಶದಲ್ಲಿ ಏಳೆಂಟು ವರ್ಷದಿಂದ ತರಕಾರಿ ಬೆಳೆಯುತ್ತಿದ್ದ ಕೋಲ್ಕತ್ತದ ಜಾಬೆದ್ ಅಲಿ ಎಂಬುವರು, ಪ್ರಸಕ್ತ ತರಕಾರಿ ಜತೆಗೆ ಭತ್ತದ ಬೇಸಾಯ ಮಾಡುತ್ತಿದ್ದಾರೆ. ಪರಿಣಾಮ ದೃಷ್ಟಿ ಹಾಯಿಸಿದಷ್ಟು ದೂರಕ್ಕೆ ನಳನಳಿಸುತ್ತಿರುವ ಪಚ್ಚನೆ ಭತ್ತದ ಪೈರು ಕಾಣಿಸುತ್ತಿದೆ.

    ಜಾಬೆದ್ ಅಲಿ ಅವರು ಕಳೆದ ಏಳೆಂಟು ವರ್ಷದಿಂದ ಅಂದಾಜು 20-30 ಎಕರೆ ಗದ್ದೆ ಪ್ರದೇಶದಲ್ಲಿ ಬದನೆ, ಬೆಂಡೆಕಾಯಿ, ಬೂದು ಕುಂಬಳ ಕಾಯಿ, ಹಾಗಲ, ಮೆಣಸಿನ ಕಾಯಿ, ಪಡುವಲ ಕಾಯಿ, ಸೌತೆ, ಸೋರೆಕಾಯಿಯಂತಹ ಬಹು ವಿಧದ ತರಕಾರಿ ಬೆಳೆಯುತ್ತಿದ್ದರು. ಈ ಬಾರಿ ಬದನೆ ಮಾತ್ರ ಬೆಳೆದಿದ್ದಾರೆ. ಮೂರು ವರ್ಷದಿಂದ ಇಲ್ಲಿನ ಒಂದಷ್ಟು ಗದ್ದೆ ಪ್ರದೇಶದಲ್ಲಿ ಭತ್ತ ಬೆಳೆಯಲಾರಂಭಿಸಿದ್ದ ಅವರು, ಈ ವರ್ಷ ತರಕಾರಿ ಬೆಳೆ ಕಡಿಮೆ ಮಾಡಿ ಭತ್ತದ(ಕಜೆ ಜಯ ತಳಿ) ಬೇಸಾಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

    ಹಡೀಲು ಭೂಮಿಗೆ ಜೀವ ಕಳೆ

    ಗುರುಪುರಕ್ಕೆ ಹತ್ತಿರ ಫಲ್ಗುಣಿ ನದಿ ತೀರದಲ್ಲಿರುವ ಈ ಗದ್ದೆಗಳಿಗೆ ನೀರಿನ ಕೊರತೆ ಇಲ್ಲ. ಪ್ರಸಕ್ತ ಕಡು ಬೇಸಗೆಯಲ್ಲೂ ‘ಕೊಳಕೆ’ ಭತ್ತದ ಬೆಳೆಯಲ್ಲಿ ಉತ್ತಮ ಇಳುವರಿ ಬಂದಿದೆ. ಭತ್ತದ ಬೇಸಾಯ ಅಥವಾ ತರಕಾರಿ ಬೆಳೆಗೆ ಇವರು ಕೋಲ್ಕತ್ತದಿಂದಲೇ ಕೂಲಿಯಾಳು ಕರೆತರುತ್ತಿದ್ದಾರೆ. ಕೃಷಿಗೆ ಖಾಸಗಿ ಯಂತ್ರ ಸಂಸ್ಥೆಗಳ ನೆರವು ಪಡೆದಿರುವ ಇವರಿಗೆ ಸ್ಥಳೀಯ ಕೃಷಿಕರು ಸಹಾಯ ಮಾಡುತ್ತಿದ್ದಾರೆ. ಕೆಲವರು ಸಾಮಾನ್ಯ ಒಡಂಬಡಿಕೆ ಮೇರೆಗೆ ಪಂಪ್‌ನಿಂದ ನೀರು ಪೂರೈಸುತ್ತಿದ್ದಾರೆ. ಹಾಗಾಗಿ ಕೃಷಿ ಬಗ್ಗೆ ಅತೀವ ಕಾಳಜಿ ಹಾಗೂ ಪ್ರೀತಿ ಹೊಂದಿರುವ ಜಾಬೆದ್ ಅವರಿಂದ ಇಲ್ಲಿನ ಯತಿರಾಜ ಆಳ್ವ, ರಾಜಶೇಖರ ಭಂಡಾರಿ, ಯಶವಂತ ಶೆಟ್ಟಿ, ಸದಾಶಿವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಮತ್ತಿತರರ ಹಡೀಲು ಗದ್ದೆಗಳಿಗೆ ಈಗ ಜೀವ ಕಳೆ ಬಂದಿದ್ದು, ಭೂತಾಯಿ ಹಸಿರಾಗಿದ್ದಾಳೆ.
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ಗದ್ದೆ ಪ್ರದೇಶ ಹಡೀಲು ಬಿದ್ದಿದ್ದು, ಇಲ್ಲೆಲ್ಲ ಭತ್ತದ ಬೇಸಾಯಕ್ಕೆ ಅವಕಾಶ ಸಿಕ್ಕರೆ ಮತ್ತೆ ಹರಿದ್ವರ್ಣ ಕಾಣಲು ಸಾಧ್ಯವಿದೆ. ಕೃಷಿಯಲ್ಲಿ ಅತೀವ ಆಸಕ್ತಿ ಹೊಂದಿರುವ ಜಾಬೆದ್ ಅಲಿ ಮತ್ತವರ ಕುಟುಂಬ ಕೋಲ್ಕತ್ತದಿಂದ ಇಲ್ಲಿಗೆ ಬಂದಿದ್ದು, ಜಿಲ್ಲೆಯ ಯುವಜನತೆಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವಂತಹ ಸಾಧನೆಗೈದಿದ್ದು, ತರಕಾರಿ ಮತ್ತು ಭತ್ತದ ಕೃಷಿಯಲ್ಲಿ ಮಾದರಿ ವ್ಯಕ್ತಿಯಾಗಿದ್ದಾರೆ.

    ಗದ್ದೆಗಳಲ್ಲೇ ಬಿಡಾರ

    ಮೂಲತಃ ಕೋಲ್ಕತ್ತದ ಬರಾಸತ್ ನಗರ ನಿವಾಸಿ ಜಾಬೆದ್ ಅಲಿ ಬೈಲುಪೇಟೆಯಲ್ಲಿ ಕೃಷಿ ಮಾಡುವುದಕ್ಕಿಂತ ಮುಂಚೆ ಜಿಲ್ಲೆಯ ಒಂದೆರಡು ಕಡೆಯಲ್ಲಿ ತರಕಾರಿ ಕೃಷಿ ಮಾಡಿದ್ದರು. ಇವರ ಜತೆಯಲ್ಲಿ ಪತ್ನಿ, ಪುತ್ರ ಬಿಲಾಸ್ ಮುಲ್ಲ, ಮಹಿಳೆಯರ ಸಹಿತ ಸುಮಾರು 25-30 ಮಂದಿ ಕೂಲಿಕೂಳುಗಳು ಇದ್ದಾರೆ. ಇವರೆಲ್ಲ ಇಲ್ಲಿನ ಗದ್ದೆ ಪ್ರದೇಶದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಬಿಡಾರಗಳಲ್ಲಿ ವಾಸಿಸುತ್ತಿದ್ದಾರೆ.

    ಉಳುಮೆಯ ಅಗತ್ಯವಿರುವ ಟಿಲ್ಲರ್ ಹಾಗೂ ಇತರ ಯಂತ್ರೋಪಕರಣ ಹೊಂದಿರುವ ಇವರು, ಖಾಸಗಿಯವರ ಕಟಾವು ಯಂತ್ರ ಹಾಗೂ ಕೂಲಿಯಾಳುಗಳ ಸಹಾಯದಿಂದ ಭತ್ತ ಕಟಾವು ಮಾಡುತ್ತಾರೆ. ಆಧುನಿಕ ಕೃಷಿ ಪದ್ಧತಿಯಂತೆ ಯಂತ್ರದಿಂದ ಕಟಾವು ಮಾಡಿ, ಭತ್ತ ಬೇರ್ಪಡಿಸಲಾದ ಬೈಹುಲ್ಲನ್ನು ಯಂತ್ರದ ಮೂಲಕ ಬಂಡಲ್ ಮಾಡಿ ಮಾರಾಟ ಮಾಡುತ್ತಾರೆ. ಈ ಬೈಹುಲ್ಲಿಗೆ ಹೆಂಚಿನ ಕಾರ್ಖಾನೆ ಮತ್ತಿತರ ಉದ್ಯಮಗಳಿಂದ ಬೇಡಿಕೆ ಇದೆ. ಇವರ ಕೃಷಿ ಪದ್ಧತಿ ತುಳುನಾಡಿನ ಕೃಷಿ ಪದ್ಧತಿ ಹೋಲುವಂತಿದೆ. ಭತ್ತದ ಕಟಾವು ಮಾಡಿ ‘ಸೂಡಿ’ ಕಟ್ಟಿ ಸಾಲಾಗಿ ಇಡುತ್ತಾರೆ. ಕೂಲಿಯಾಳುಗಳ ಸಹಾಯದಿಂದ ನೇರವಾಗಿ ಭತ್ತ ಪ್ರತ್ಯೇಕಿಸುವ ಮೈದಾನಕ್ಕೆ ಕೊಂಡೊಯ್ಯುತ್ತಾರೆ. ಆದರೆ ಭತ್ತ ಬೇರ್ಪಡಿಸುವ ವಿಧಾನ ಮಾತ್ರ ತುಸು ಭಿನ್ನವಾಗಿದೆ.

    ಭಿನ್ನ ಪಡಿ

    ತುಳುನಾಡಿನಲ್ಲಿ ಭತ್ತ ಬೇರ್ಪಡಿಸಲು ಮರದಿಂದ ತಯಾರಿಸಲಾದ ‘ಪಡಿ’ ಬಳಸಲಾಗುತ್ತದೆ. ಇಲ್ಲಿನ ಕೆಲವು ಕೃಷಿಕರಲ್ಲಿ ಈಗಲೂ ಮೂರ‌್ನಾಲ್ಕು ತಲೆಮಾರಿನ ಪಡಿ ಇದೆ. ಆದರೆ ಜಾಬೆದ್ ಅಲಿ ಅವರು ಸಿದ್ಧಪಡಿಸಿದ ಪಡಿ ಮಾತ್ರ ಭಿನ್ನವಾಗಿದೆ. ಕಂಗಿನಿಂದ ತಯಾರಿಸಲಾದ ಹತ್ತಾರು ಉದ್ದನೆಯ ‘ಸಲಾಕೆ’ಗಳನ್ನು ಹಗ್ಗದಿಂದ ಪೋಣಿಸಿ ‘ಪಡಿ’ ನಿರ್ಮಿಸಲಾಗಿದ್ದು, ಭತ್ತ ಬೇರ್ಪಡಿಸುವ ಸಂದರ್ಭ ಇದಕ್ಕೆ ನೆಲದಿಂದ ತುಸು ಎತ್ತರಕ್ಕೆ ನಾಲ್ಕು ಕಂಬ ಅಳವಡಿಸಲಾಗುತ್ತದೆ.

    ಹಡೀಲು ಗದ್ದೆಗಳಲ್ಲಿ ಹಸಿರುಕ್ರಾಂತಿ: ಬೈಲುಪೇಟೆಯಲ್ಲಿ ತರಕಾರಿ ಜತೆಗೆ ಭತ್ತ ಬೇಸಾಯ: 30 ಎಕರೆಯಲ್ಲಿ ಕೃಷಿ

    ಏಳೆಂಟು ವರ್ಷದಿಂದ ಇಲ್ಲಿ ಬೆಳೆಯಲಾದ ತರಕಾರಿ ಮಂಗಳೂರು ಮಾರುಕಟ್ಟೆ ಹಾಗೂ ಇತರ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದೇವೆ. ಅಗತ್ಯಕ್ಕೆ ತಕ್ಕಂತೆ ಗೊಬ್ಬರ ಹಾಕುತ್ತೇವೆ. ಭತ್ತಕ್ಕೆ ಭಾರೀ ಬೇಡಿಕೆ ಇರುವುದರಿಂದ ಕಳೆದ ಮೂರು ವರ್ಷದಿಂದ ಭತ್ತದ ಬೇಸಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ನಮ್ಮ ಕುಟುಂಬಕ್ಕೆ ಕೃಷಿ ಅನುಭವ ಇದೆ. ಸ್ಥಳೀಯರ ಬೆಂಬಲ ಸಿಕ್ಕಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ಇದಕ್ಕಿಂತ ಮತ್ತೇನು ಬೇಕು.

    – ಜಾಬೆದ್ ಅಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts