More

    ದಡ್ಡಲಕಾಡು ಶಾಲೆಗೆ ಪಿಎಂಶ್ರೀ ಗರಿ

    ವಿಜಯವಾಣಿ ಸುದ್ದಿಜಾಲ ಬಂಟ್ವಾಳ

    ಒಂಬತ್ತು ವರ್ಷದ ಹಿಂದೆ ಬೆರಳೆಣಿಕೆಯ ಮಕ್ಕಳಿದ್ದು ಮುಚ್ಚುವ ಹಂತಕ್ಕೆ ತಲುಪಿದ್ದ ಮೂಡುನಡುಗೋಡು ಗ್ರಾಮದ ದಡ್ಡಲಕಾಡು ಸರ್ಕಾರಿ ಶಾಲೆಯನ್ನು ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ದತ್ತು ಪಡೆದುಕೊಂಡ ಬಳಿಕ 1,200ಕ್ಕಿಂತಲೂ ಅಧಿಕ ಮಕ್ಕಳನ್ನು ಹೊಂದಿ ಸರ್ಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆಯಾಗಿ ಅಭಿವೃದ್ಧಿ ಕಂಡಿದೆ. ಇದೀಗ ಪ್ರಧಾನಮಂತ್ರಿಯವರ ಮಹಾತ್ವಕಾಂಕ್ಷಿ ಪಿಎಂಶ್ರೀ ಯೋಜನೆಗೆ ಆಯ್ಕೆಗೊಂಡಿದೆ.

    ತಾಲೂಕಿನಲ್ಲಿ ಎರಡು ಪ್ರೌಡಶಾಲೆ ಹಾಗೂ ಒಂದು ಪ್ರಾಥಮಿಕ ಶಾಲೆ ಸೇರಿ ಒಟ್ಟು 3 ಶಾಲೆಗಳು ಪಿಎಂಶ್ರೀ ಯೋಜನೆಗೆ ಆಯ್ಕೆಯಗಿದೆ. ಸರ್ಕಾರಿ ಶಾಲೆಗಳನ್ನು ತಂತ್ರಜ್ಞಾನ ಆಧಾರಿತ ನಾವೀನ್ಯ ಬೋಧನಾ ವ್ಯವಸ್ಥೆ, ಕೌಶಲ, ಆವಿಷ್ಕಾರ, ಉತ್ತಮ ಮೂಲಸೌಕರ್ಯ ಸೇರಿದಂತೆ ಸರ್ವತೋಮುಖ ಬೆಳವಣಿಗೆಯೊಂದಿಗೆ ಉನ್ನತೀಕರಿಸಲು ಕೇಂದ್ರ ಸರ್ಕಾರ ಘೋಷಿಸಿರುವ ಮಹತ್ವಕಾಂಕ್ಷಿ ಯೋಜನೆ ಪಿಎಂಶ್ರೀ(ಪಿಎಂ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ). ಸುಸ್ಥಿತಿಯ ಸ್ವಂತ ಕಟ್ಟಡ ಹೊಂದಿರುವ ಶಾಲೆ, ತಡೆಗೋಡೆ, ಅಗ್ನಿ ಸುರಕ್ಷೆ, ಪ್ರತ್ಯೇಕ ಶೌಚಗೃಹ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್, ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾ ಸೌಕರ್ಯ ಮೊದಲಾದ ಮಾನದಂಡಗಳನ್ನು ಗುರುತಿಸಿ ದಡ್ಡಲಕಾಡು ಶಾಲೆಯನ್ನು ಪಿಎಂಶ್ರೀ ಯೋಜನೆಗೆ ಅಳವಡಿಸಲಾಗಿದೆ.

    ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿರುವ ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿರುವುದು ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್, ಶಿಕ್ಷಕ ವೃಂದ ಹಾಗೂ ಇಲಾಖಾಧಿಕಾರಿಗಳ ಶ್ರಮಕ್ಕೆ ಗೆಲುವು ಸಿಕ್ಕಂತಾಗಿದೆ.

    ಯೋಜನೆ ವಿಶೇಷತೆ

    ಹೊಸ ಶಿಕ್ಷಣ ನೀತಿ ಅಳವಡಿಕೆ, ಅತ್ಯಾಧುನಿಕ ಮೂಲ ಸೌಕರ್ಯ, ಸುಸಜ್ಜಿತ ಪ್ರಯೋಗಾಲಯ, ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಕ್ಲಾಸ್, ಸುಸಜ್ಜಿತ ಗ್ರಂಥಾಲಯ ಸೌಲಭ್ಯ, ಎಲ್ಲ ಮಾದರಿಯ ಕ್ರೀಡೆಗಳಿಗೆ ಪ್ರೋತ್ಸಾಹ, ಪರಿಸರ ಸ್ನೇಹಿ ವಾತಾವರಣವನ್ನು ಈ ಯೋಜನೆ ಒದಗಿಸುತ್ತವೆ. ಅಲ್ಲದೆ ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಜತೆಗೆ ಪರಿಸರ ಸ್ನೇಹಿ ಅಂಶಗಳನ್ನು ಸೇರಿಸಿಕೊಂಡು ಹಸಿರು ಶಾಲೆಗಳಾಗಿ ಅಭಿವೃದ್ಧಿಪಡಿಸುವುದು ಯೋಜನೆ ಪ್ರಮುಖ ಉದ್ದೇಶ.

    ದಡ್ಡಲಕಾಡು ಸರ್ಕಾರಿ ಆಂಗ್ಲಮಾಧ್ಯಮ ಶಾಲೆ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿರುವುದು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಈ ವರ್ಷ ರಾಜ್ಯದ 205 ಪ್ರಾಥಮಿಕ ಹಾಗೂ 40 ಪ್ರೌಢಶಾಲೆಗಳಿಗೆ ಈ ಯೋಜನೆ ಮಂಜೂರಾಗಿದ್ದು, ಅದರಲ್ಲಿ ನಮ್ಮ ಶಾಲೆಯೂ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗುಣಮಟ್ಟದ ಶಿಕ್ಷಣ ದೊರೆಯುವುದಲ್ಲದೆ, ವಿಶಿಷ್ಟ ಹಾಗೂ ವಿನೂತನ ಕಲಿಕಾ ವ್ಯವಸ್ಥೆಗಳು ನಮ್ಮೂರಿನ ಗ್ರಾಮೀಣ ಮಕ್ಕಳಿಗೂ ಸಿಗಲಿದೆ.
    -ಪ್ರಕಾಶ್ ಅಂಚನ್, ಅಧ್ಯಕ್ಷ, ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್

    ಪಿಎಂಶ್ರೀ ಯೋಜನೆ ನಮ್ಮ ಶಾಲೆಗೆ ಸಿಕ್ಕಿರುವುದು ಅತೀವ ಸಂತಸ ತಂದಿದೆ. ಇದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಲಿದೆ.
    -ರಮಾನಂದ, ಮುಖ್ಯ ಶಿಕ್ಷಕ, ಸರ್ಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆ ದಡ್ಡಲಕಾಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts