ನ್ಯೂಸ್

VIDEO| ತಾಜ್​ಮಹಲ್​ ಎದುರು ಕೇಸರಿ ಧ್ವಜ ಹಾರಿಸಿ, ಜೈ ಶ್ರೀರಾಮ್​ ಘೋಷಣೆ ಕೂಗಿದ ಹಿಂದೂ ಯುವಕರು!

ಆಗ್ರಾ: ಕೆಲ ದಿನಗಳ ಹಿಂದೆ ಹಿಂದೂ ದೇವಸ್ಥಾನವೊಂದರಲ್ಲಿ ಮುಸ್ಲಿಂ ಯುವಕರು ನಮಾಜ್​ ಮಾಡಿ ಪ್ರಕರಣ ದಾಖಲಾದ ಬೆನ್ನಲ್ಲೇ ಇದೀಗ ಮತ್ತೊಂದು ಅದೇ ರೀತಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಪ್ರಕರಣ ದಾಖಲಾಗಿದೆ. ಪ್ರಸಿದ್ಧ ಪ್ರವಾಸಿ ತಾಣವಾಗಿರುವ ತಾಜ್​ಮಹಲ್​ ಎದುರು ಹಿಂದೂ ಯುವಕರು ಕೇಸರಿ ಧ್ವಜ ಹಾರಿಸಿ, ಜೈ ಶ್ರೀ ರಾಮ್​ ಘೋಷಣೆ ಕೂಗಿದ್ದಾರೆ.

ಸೋಮವಾರದಂದು ಕೆಲ ಯುವಕರು ಕೇಸರಿ ಧ್ವಜವನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ತಾಜ್​ಮಹಲ್​ ಆವರಣಕ್ಕೆ ತಲುಪಿದ್ದಾರೆ. ತಾಜ್​ಮಹಲ್​ ಎದುರಿನ ಬೆಂಚಿನ ಮೇಲೆ ಕುಳಿತು ನಂತರ ಜೇಬಿನಿಂದ ಕೇಸರಿ ಧ್ವಜ ತೆಗೆದು ಗಾಳಿಯಲ್ಲಿ ಹಾರಾಡಿಸಿದ್ದಾರೆ. ಜೈ ಶ್ರೀ ರಾಮ್​ ಘೋಷಣೆಯನ್ನೂ ಕೂಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಹಿಂದೂ ಯುವಕರು ಈ ರೀತಿ ಮಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಿಐಎಸ್​ಎಫ್​ ತಂಡ ತಾಣದ ರಕ್ಷಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದೆ. ಧ್ವಜ ಹಾರಿಸಿದ್ದ ಯುಕವರನ್ನು ಸೆರೆ ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದೆ. ಯುವಕರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಮತ್ತು ಉನ್ಮಾದವನ್ನು ಪ್ರಚೋದಿಸಿದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಿಂದೂ ಜಿಲ್ಲಾ ವಾಹಿನಿ ಅಧ್ಯಕ್ಷ ಗೌರವ್ ಠಾಕೂರ್, ಸೋನು ಬಾಗೇಲ್, ವಿಶೇಶ್ ಕುಮಾರ್ ಮತ್ತು ರಿಷಿ ಲವಾನಿಯಾ ವಿರುದ್ಧ ದೂರು ದಾಖಲಾಗಿದೆ ಎನ್ನಲಾಗಿದೆ. ಗೌರವ್ ಠಾಕೂರ್ ಅವರು ಈ ಹಿಂದೆ ತಾಜ್‌ಮಹಲ್‌ನಲ್ಲಿ ಶಿವ ಚಾಲೀಸಾ ಪಠಿಸುವ ವಿಡಿಯೋ ಮಾಡಿದ್ದರು. (ಏಜೆನ್ಸೀಸ್​)