School Teacher : ಸರ್ಕಾರಿ ಶಾಲೆಯ 24 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಬಂಧಿಸಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಲೈಂಗಿಕ ಕಿರುಕುಳ ಸಮಿತಿ ಸಭೆಯ ವೇಳೆ ಗಣಿತ ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರು ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಶಿಕ್ಷಕನನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ನಡೆದ 'ಶಿಕ್ಷಾ ಸಂವಾದ' ಕಾರ್ಯಕ್ರಮದ ಸಂದರ್ಭದಲ್ಲಿ, 9 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕಿರುಕುಳದ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದರು. ಶಾಲೆಯ ಗಣಿತ ಶಿಕ್ಷಕ ತಮ್ಮನ್ನು ಅನುಚಿತವಾಗಿ ಮುಟ್ಟಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಲಿಖಿತ ದೂರು ಸಲ್ಲಿಸಿದರು.
ಈ ಸಂಬಂಧ ವಿದ್ಯಾರ್ಥಿಗಳ ಪಾಲಕರನ್ನು ಕರೆಸಿ ವಿಚಾರಿಸಿದಾಗ, ತಮ್ಮ ಮಕ್ಕಳು ಎದುರಿಸುತ್ತಿರುವ ಕಿರುಕುಳದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಮಕ್ಕಳ ಮೇಲಿನ ದೌರ್ಜನ್ಯದ ವಿಷಯ ತಿಳಿದ ಕೂಡಲೇ, ಪಾಲಕರು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕನ ವಿರುದ್ಧ ಘೋಷಣೆಗಳನ್ನು ಕೂಗಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದರ ಬೆನ್ನಲ್ಲೇ ಪ್ರಕರಣ ದಾಖಲಿಸಿ, ಶೀಘ್ರದಲ್ಲೇ ಆರೋಪಿ ಶಿಕ್ಷಕನನ್ನು ಬಂಧಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.
ಇದನ್ನು "ಗಂಭೀರ ಮತ್ತು ಸೂಕ್ಷ್ಮ" ಘಟನೆ ಎಂದು ಕರೆದಿರುವ ಸಿರ್ಮೌರ್ ಜಿಲ್ಲೆಯ ಶಾಲಾ ಶಿಕ್ಷಣ ನಿರ್ದೇಶಕರು, ಈ ವಿಷಯದ ಬಗ್ಗೆ ತಕ್ಷಣ ಪ್ರಾಥಮಿಕ ತನಿಖೆ ನಡೆಸುವಂತೆ ಸಿರ್ಮೌರ್‌ನ ಪ್ರಾಥಮಿಕ ಶಿಕ್ಷಣದ ಉಪ ನಿರ್ದೇಶಕರನ್ನು ಕೇಳಿದ್ದಾರೆಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಶಾಲೆಗೆ ವೈಯಕ್ತಿಕವಾಗಿ ಭೇಟಿ ನೀಡಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರ ಸಿಬ್ಬಂದಿಯ ಹೇಳಿಕೆಯನ್ನು ದಾಖಲಿಸಿಕೊಂಡು, ಒಂದು ವಾರದೊಳಗೆ ತಮ್ಮ ಕಚೇರಿಗೆ ವರದಿಯನ್ನು ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ.
ಸಿರ್ಮೌರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ರೋಲ್ಟಾ ಮಾತನಾಡಿ, ಈ ವಿಷಯವು ಗಂಭೀರವಾಗಿದೆ ಮತ್ತು ತನಿಖೆಯನ್ನು ಆದ್ಯತೆಯ ಮೇರೆಗೆ ನಡೆಸಲಾಗುತ್ತಿದೆ. ಪ್ರಸ್ತುತ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಘಟನಾ ಸ್ಥಳದ ಭೇಟಿಯನ್ನು ಸಹ ಪೂರ್ಣಗೊಳಿಸಿದ್ದೇವೆ ಎಂದಿದ್ದಾರೆ. ಆರೋಪಿಯನ್ನು ಭಾನುವಾರ ಸಂಜೆ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. (ಏಜೆನ್ಸೀಸ್)