

Revenge Story : ಚೆನ್ನೈ ಮೂಲದ ಯುವತಿಯೊಬ್ಬಳು ಓರ್ವ ಯುವಕನನ್ನು ತುಂಬಾ ಪ್ರೀತಿ ಮಾಡುತ್ತಿದ್ದಳು. ಆದರೆ, ಅದು ಒನ್ ಸೈಡ್ ಲವ್ ಆಗಿತ್ತು. ತನ್ನ ಪ್ರೇಮ ನಿವೇದನೆಯನ್ನು ಆತ ನಿರಾಕರಿಸಿದಾಗ ಸೇಡು ತೀರಿಸಿಕೊಳ್ಳಲು ಆಕೆ ಒಂದು ದೊಡ್ಡ ಸಂಚನ್ನೇ ರೂಪಿಸಿದಳು. ಇದರ ಭಾಗವಾಗಿ, ಆಕೆ ದೇಶದ 11 ರಾಜ್ಯಗಳಲ್ಲಿ ಭಯ ಹುಟ್ಟುಹಾಕಿದಳು. ಈ ಸೇಡಿನ ಕತೆಯ ಕೊನೆಯಲ್ಲಿ ಏನಾಯ್ತು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ರೋಬೊಟಿಕ್ಸ್ ಅಧ್ಯಯನ ಮಾಡಿ ಡೆಲಾಯ್ಟ್‌ನಲ್ಲಿ ಹಿರಿಯ ಸಲಹೆಗಾರಳಾಗಿ ಕೆಲಸ ಮಾಡುತ್ತಿರುವ ಯುವತಿ ರೆನೀ ಜೋಶಿಲ್ಡಾ, ದಿವಿಜ್ ಪ್ರಭಾಕರ್ ಎಂಬ ಯುವಕನೊಂದಿಗೆ ಒನ್ ಸೈಡ್ ಲವ್ ಹೊಂದಿದ್ದಳು. ಪ್ರೇಮ ನಿವೇದನೆ ಮಾಡಿದಾಗ ಆತ ಅದನ್ನು ಒಪ್ಪಿಕೊಳ್ಳಲಿಲ್ಲ. ಅಲ್ಲದೇ, 2025ರ ಫೆಬ್ರವರಿ ತಿಂಗಳಲ್ಲಿ ಪ್ರಭಾಕರ್, ಬೇರೊಂದು ಯುವತಿಯನ್ನು ಮದುವೆಯಾದರು. ಇದರಿಂದ ಅಸಮಾಧಾನಗೊಂಡ ಜೋಶಿಲ್ಡಾ, ಪ್ರಭಾಕರ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದಳು.
ಪ್ರಭಾಕರ್ ಹೆಸರಿನಲ್ಲಿ ಹಲವಾರು ನಕಲಿ ಇಮೇಲ್ ಖಾತೆಗಳನ್ನು ರಚಿಸಿದ ಜೋಶಿಲ್ಡಾ, ಆ ಇಮೇಲ್ ಐಡಿಗಳನ್ನು ಬಳಸಿಕೊಂಡು ವಿವಿಧ ಪ್ರದೇಶಗಳಿಗೆ ಬಾಂಬ್ ಬೆದರಿಕೆ ಮತ್ತು ಸಂದೇಶಗಳನ್ನು ಕಳುಹಿಸಿದಳು. ಈ ಬೆದರಿಕೆಗಳು ದೇಶದ 11 ರಾಜ್ಯಗಳಲ್ಲಿ ಸಂಚಲನ ಮೂಡಿಸಿವೆ. ಬೆದರಿಕೆ ಸಂದೇಶಗಳು ಸಾರ್ವಜನಿಕ ಸ್ಥಳಗಳನ್ನೇ ಗುರಿಯಾಗಿಸಿಕೊಂಡಿದ್ದವು. ಈ ಬಗ್ಗೆ ಹಲವಾರು ಪೊಲೀಸ್ ಇಲಾಖೆಗಳು ಜಂಟಿಯಾಗಿ ಪ್ರತಿಕ್ರಿಯಿಸಿ, ಬೆದರಿಕೆ ಇ-ಮೇಲ್‌ಗಳನ್ನು ಯಾರು ಕಳುಹಿಸುತ್ತಿದ್ದಾರೆ ಎಂಬುದರ ಕುರಿತು ತನಿಖೆ ಆರಂಭಿಸಿದರು. ಕೊನೆಗೂ, ಅಹಮದಾಬಾದ್‌ನ ಸೈಬರ್ ಅಪರಾಧ ವಿಭಾಗವು ಜೋಶಿಲ್ಡಾ ಅವರನ್ನು ಗುರುತಿಸಿ ಬಂಧಿಸಿದೆ.
ಜೋಶಿಲ್ಡಾ, ಡಾರ್ಕ್ ವೆಬ್ ಮೂಲಕ ಈ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಳು. ಯಾರೂ ತನ್ನನ್ನು ಗುರುತಿಸುವುದಿಲ್ಲ ಎಂದು ಆಕೆ ಭಾವಿಸಿದ್ದಳು. ಆ ಸಮಯದಲ್ಲಿ, ಆ ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಪೊಲೀಸರಿಗೆ ಸಿಕ್ಕಿಬಿದ್ದಳು. ಪೊಲೀಸರು ಚೆನ್ನೈನಲ್ಲಿ ಅವಳ ಸ್ಥಳವನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಪೊಲೀಸರು ಅವಳಿಂದ ಡಿಜಿಟಲ್ ಡೇಟಾ ಮತ್ತು ಹಲವಾರು ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಭಾಕರ್ ನನ್ನ ಪ್ರೀತಿಯನ್ನು ನಿರಾಕರಿಸಿದ. ಹೀಗಾಗಿ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದೆ ಎಂದು ಜೋಶಿಲ್ಡಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಆದರೂ, ಇಷ್ಟು ದೊಡ್ಡ ಬೆದರಿಕೆಯ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ? ಅಥವಾ ಇದು ಆಕೆಯ ಕೃತ್ಯವೇ? ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 11 ರಾಜ್ಯಗಳ ಪೊಲೀಸ್ ಇಲಾಖೆಗಳು ಉಳಿದ ಮಾಹಿತಿಯನ್ನು ಸಂಗ್ರಹಿಸುತ್ತಿವೆ. (ಏಜೆನ್ಸೀಸ್)