

Meghalaya honeymoon Case : ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ತೆಲಂಗಾಣದಲ್ಲೂ ಅದೇ ರೀತಿಯ ಘಟನೆ ನಡೆದಿದೆ. ಮದುವೆಯಾದ ಕೇವಲ ಒಂದು ತಿಂಗಳಲ್ಲೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವ ಘಟನೆ ಗಡ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಪತ್ನಿ ಮತ್ತು ಆಕೆಯ ತಾಯಿಯನ್ನು ವಿಚಾರಣೆ ನಡೆಸುತ್ತಿದ್ದು, ತನಿಖೆಯಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ ಬರುತ್ತಿವೆ.
ಜೋಗುಳಂಬ ಗಡ್ವಾಲ್ ಜಿಲ್ಲೆಯ ತೇಜೇಶ್ವರ್ (32) ಖಾಸಗಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು. ಈ ವರ್ಷ ಫೆಬ್ರವರಿ 13 ರಂದು ಆಂಧ್ರ ಪ್ರದೇಶದ ಕರ್ನೂಲ್ ಮೂಲದ ಐಶ್ವರ್ಯ ಅವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಮದುವೆಗೆ ಐದು ದಿನಗಳ ಮೊದಲು ಐಶ್ವರ್ಯಾ ನಾಪತ್ತೆಯಾಗಿದ್ದರು. ಫೆಬ್ರವರಿ 16 ರಂದು ಮನೆಗೆ ಹಿಂದಿರುಗಿದ ಐಶ್ವರ್ಯಾ, ತೇಜೇಶ್ವರ್ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿ, ತಾನು ಯಾರನ್ನೂ ಪ್ರೀತಿಸುತ್ತಿಲ್ಲ ಮತ್ತು ವರದಕ್ಷಿಣೆ ನೀಡಲು ತನ್ನ ತಾಯಿ ಎದುರಿಸುತ್ತಿರುವ ತೊಂದರೆಯನ್ನು ಸಹಿಸಲಾಗದೆ ತನ್ನ ಫ್ರೆಂಡ್ ಮನೆಗೆ ಹೋಗಿದ್ದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಅಳುತ್ತಾ ಹೇಳಿದಳು. ಐಶ್ವರ್ಯಾಳ ಮಾತುಗಳನ್ನು ನಂಬಿದ ತೇಜೇಶ್ವರ್, ಮನೆಯವರ ಒಪ್ಪಿಗೆ ಇಲ್ಲದೇ ಹೋದರು ಮದುವೆಗೆ ಒಪ್ಪಿಕೊಂಡನು. ಬಳಿಕ ತೇಜೇಶ್ವರ್ ಮತ್ತು ಐಶ್ವರ್ಯಾ ಮೇ 18 ರಂದು ವಿವಾಹವಾದರು.
ಮದುವೆಯ ನಂತರ ಐಶ್ವರ್ಯಾ, ನಿರಂತರವಾಗಿ ಫೋನ್‌ನಲ್ಲಿ ಮಾತನಾಡುವುದನ್ನು ಗಮನಿಸಿದ ತೇಜೇಶ್ವರ್ ಆಕೆಯನ್ನು ಗದರಿಸಿದನು. ಇದರಿಂದ ದಂಪತಿ ನಡುವೆ ಬಿರುಕು ಮೂಡಿತು. ಇಬ್ಬರು ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ, ಜೂನ್ 17ರಂದು ತೇಜೇಶ್ವರ್ ನಾಪತ್ತೆಯಾಗಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ಕೂಡ ದಾಖಲಾಗಿತ್ತು. ತನಿಖೆ ನಡೆಯುವಾಗಲೇ ಭಾನುವಾರ ಆಂಧ್ರಪ್ರದೇಶದ ಪನ್ಯಂ ಬಳಿಯ ಸುಗಲಿಮೆಟ್ಟ ಜಮ್ಮುವಿನಲ್ಲಿ ತೇಜೇಶ್ವರ್ ಅವರ ಶವ ಪತ್ತೆಯಾಯಿತು.
ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದಾಗ, ಮದುವೆಯ ನಂತರ ಐಶ್ವರ್ಯಾ ಬ್ಯಾಂಕ್ ಉದ್ಯೋಗಿ ತಿರುಮಲ ರಾವ್ನೊಂದಿಗೆ ಸುಮಾರು 2,000 ಬಾರಿ ಫೋನ್‌ನಲ್ಲಿ ಮಾತನಾಡಿರುವುದು ಕಂಡುಬಂತು. ಬಳಿಕ ಐಶ್ವರ್ಯಾ ಮತ್ತು ಆಕೆಯ ತಾಯಿ ಸುಜಾತಾರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದವು.
ಐಶ್ವರ್ಯಾಳ ತಾಯಿ ಸುಜಾತ ಕರ್ನೂಲ್‌ನ ಬ್ಯಾಂಕಿನಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಾರೆ. ಅದೇ ಬ್ಯಾಂಕಿನ ಉದ್ಯೋಗಿಯಾಗಿರುವ ತಿರುಮಲ ರಾವ್ನೊಂದಿಗೆ ವಿವಾಹೇತರ ಸಂಬಂಧವಿತ್ತು. ಕೆಲವು ದಿನಗಳ ನಂತರ, ಐಶ್ವರ್ಯಾಳಿಗೂ ತಿರುಮಲ ರಾವ್ ಜತೆ ಸಂಬಂಧ ಬೆಳೆಯಿತು. ಆದಾಗ್ಯೂ, ತೇಜೇಶ್ವರ್ರನ್ನು ಮದುವೆಯಾಗಿ ಆನಂತರ ಅವರನ್ನು ಕೊಂದು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದ್ದರು ಎಂದು ತಿಳಿದುಬಂದಿದೆ.
ಈ ಯೋಜನೆಯ ಭಾಗವಾಗಿ, ತಿರುಮಲ ರಾವ್, ತೇಜೇಶ್ವರನನ್ನು ಕೊಲ್ಲಲು ಕೆಲವು ಜನರಿಗೆ ಸುಪಾರಿ ನೀಡಿದ್ದ. ಕ್ಷೇತ್ರ ಸಮೀಕ್ಷೆಯ ಹೆಸರಿನಲ್ಲಿ ತೇಜೇಶ್ವರನನ್ನು ಕರೆದುಕೊಂಡು ಹೋಗಿ ಚಾಕುವಿನಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ಈ ಕೊಲೆಯಲ್ಲಿ ಐಶ್ವರ್ಯಾ ಮತ್ತು ಆಕೆಯ ತಾಯಿ ಸುಜಾತಾ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಬ್ಯಾಂಕ್ ಉದ್ಯೋಗಿ ತಿರುಮಲ ರಾವ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಪ್ರಕರಣದ ಸಂಪೂರ್ಣ ವಿವರಗಳನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ತನಿಖೆ ಪೂರ್ಣಗೊಂಡ ನಂತರ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸುವ ಸಾಧ್ಯತೆಯಿದೆ. (ಏಜೆನ್ಸೀಸ್)