

Leena Chandavarkar : ಬೆಳ್ಳಿತೆರೆಯ ಮೇಲೆ ರಾರಾಜಿಸುವ ಕೆಲ ಸೂಪರ್‌ಸ್ಟಾರ್‌ಗಳ ಜೀವನ ತೆರೆಯ ಹಿಂದೆ ಬೇರೆಯದ್ದೇ ರೀತಿಯಲ್ಲಿರುತ್ತದೆ. ನೋಡಲು ಐಷಾರಾಮಿಯಾಗಿ ಕಂಡರೂ ಜೀವನದಲ್ಲಿ ಅನಿರೀಕ್ಷಿತ ದುರಂತಗಳನ್ನು ಎದುರಿಸಿ, ಸಾಕಷ್ಟು ನೋವುಗಳನ್ನು ಅನುಭವಿಸಿರುತ್ತಾರೆ. ಅದೇ ರೀತಿ ಬಾಲಿವುಡ್‌ನಲ್ಲಿ ಓರ್ವ ಹಳೆಯ ಲೇಡಿ ಸೂಪರ್‌ಸ್ಟಾರ್ ಇದ್ದಾರೆ. ಅವರು ವರ್ಷಗಳಿಂದ ದುಃಖದಲ್ಲಿ ಬದುಕಿದವರು. ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡವರು. ಅವರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಲೀನಾ ಚಂದಾವರ್ಕರ್ 1970 ಮತ್ತು 80ರ ದಶಕಗಳಲ್ಲಿ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ನಟಿ. ಕರ್ನಾಟಕದ ಧಾರವಾಡ ಮೂಲದ ನಟಿಯ ಜೀವನದಲ್ಲಿ ಎಂದಿಗೂ ಸಂಭವಿಸಬಾರದ ಸಂಗತಿಗಳು ನಡೆದವು.
ಲೀನಾ ಚಂದಾವರ್ಕರ್ 1968 ರಲ್ಲಿ ಬಿಡುಗಡೆಯಾದ 'ಮಾ ಕಾ ಮೀಟ್' ಚಿತ್ರದ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು. ವಿನೋದ್ ಖನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದರು. ಈ ಚಿತ್ರ ಬಿಡುಗಡೆಯಾದಾಗ ಸೂಪರ್ ಹಿಟ್ ಆಗಿತ್ತು.
ವಿನೋದ್ ಖನ್ನಾ ಮತ್ತು ದಿಲೀಪ್ ಕುಮಾರ್ ಅವರಂತಹ ಪ್ರಮುಖ ನಟರ ನಾಯಕಿಯಾಗಿ ಅವರು ನಟಿಸಿದರು. ಈ ತಾರೆಗೆ ಅನೇಕ ಅಭಿಮಾನಿಗಳೂ ಇದ್ದರು. ನಂತರ, 24ನೇ ವಯಸ್ಸಿನಲ್ಲಿ, ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದ ಸದಸ್ಯ ಸಿದ್ಧಾರ್ಥ್ ಎಂಬ ಯುವಕನನ್ನು ಪ್ರೀತಿಸಿದರು.
ಗೋವಾದ ಮೊದಲ ಮುಖ್ಯಮಂತ್ರಿ ಬಂಡೋಡ್ಕರ್ ಅವರ ಪುತ್ರ ಸಿದ್ಧಾರ್ಥ್, ಲೀನಾಳನ್ನು ಪ್ರೀತಿಸಿ ಮದುವೆಯಾದರು. ಲೀನಾ ಅವರ ಪತಿ ಸಿದ್ಧಾರ್ಥ್ ಮದುವೆಯಾದ 11ನೇ ದಿನದಂದು ನಿಧನರಾದರು. ಬಂದೂಕನ್ನು ಸ್ವಚ್ಛಗೊಳಿಸುವಾಗ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿತು. ಪರಿಣಾಮ ಸಿದ್ಧಾರ್ಥ್ ಸ್ಥಳದಲ್ಲೇ ನಿಧನರಾದರು.
ಸಿದ್ಧಾರ್ಥ್ ನಿಧನದ ಬಳಿಕ ಲೀನಾ ತಮ್ಮ ಮನೆಗೆ ಮರಳಿದರು. ಈ ವೇಳೆ ಸಾಕಷ್ಟು ನೋವುಗಳನ್ನು ಅನುಭವಿಸಿದರು. ಖಿನ್ನತೆಗೆ ಜಾರಿದರು. ಸಿದ್ಧಾರ್ಥ್ ಸಾವಿನ ಆಘಾತದಿಂದ ಹೊರಬರುವುದು ಲೀನಾಗೆ ಕಷ್ಟಕರವಾಗಿತ್ತು. ಜನರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದು ನನಗೆ ಆ ದಿನ ಅರಿವಾಯಿತು. ನನ್ನ ಹೆತ್ತವರು ನನ್ನನ್ನು ಧಾರವಾಡಕ್ಕೆ ಕರೆದೊಯ್ದರು. ಅಲ್ಲಿ ನಾನು ಗುಣಮುಖನಾಗುತ್ತೇನೆ ಎಂದು ಭಾವಿಸಿದ್ದರು. ಆದರೆ, ಅದು ಸುಲಭವಾಗಿರಲಿಲ್ಲ. ಒಂದು ದಿನ ಬೆಳಗ್ಗೆ ನಾನು ನಮ್ಮ ಅಂಗಳದಲ್ಲಿ ನಿಂತಿದ್ದಾಗ ನನ್ನ ನೆರೆಹೊರೆಯವರು ತುಳಸಿ ಗಿಡಕ್ಕೆ ನೀರುಣಿಸುವುದನ್ನು ನೋಡಿದೆ. ನಾನು ಅವಳನ್ನು ನೋಡಿ ಮುಗುಳ್ನಕ್ಕಿದೆ ಆದರೆ, ಆಕೆ ತಕ್ಷಣ ಒಳಗೆ ಓಡಿಹೋದಳು. ವಿಧವೆಯೊಬ್ಬಳನ್ನು ಬೆಳಗ್ಗೆ ನೋಡುವುದು 'ಅಶುಭ' ಎಂದು ಆಕೆ ಭಾವಿಸಿದಳು. ಸಂಬಂಧಿಕರು ಕೂಡ ನನ್ನನ್ನು ಕೆಣಕುತ್ತಿದ್ದರು. ಒಮ್ಮೆ ನಾನು ತಿಂಡಿಗಳ ಟ್ರೇ ಅನ್ನು ಎತ್ತಿಕೊಂಡು ಅಸಹ್ಯದಿಂದ ಕೆಲವು ಸಂಬಂಧಿಕರ ಮೇಲೆಯೂ ಎಸೆದಿದ್ದೇನೆ. ನಾನು ಟ್ರ್ಯಾಂಕ್ವಿಲೈಜರ್‌ಗಳನ್ನು ತೆಗೆದುಕೊಂಡು ಮಲಗುತ್ತಲೇ ಇದ್ದೆ. ಯಾರೂ ನನ್ನ ಸುತ್ತಲೂ ಇರುವುದನ್ನು ನಾನು ಬಯಸಲಿಲ್ಲ. ಇದೆಲ್ಲದರಿಂದ ಹೊರಬರಲು ಮುಂಬೈಗೆ ಮರಳಿದೆ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಲೀನಾ ಹೇಳಿದ್ದಾರೆ.
ಜೀವನದಲ್ಲಿ ನಡೆದ ದೊಡ್ಡ ದುರಂತದ ನಂತರ, ಅವರು ಚಿತ್ರರಂಗಕ್ಕೆ ಮರಳಿದರು. ಅಲ್ಲಿಯೇ ಅವರು ನಟ ಕಿಶೋರ್ ಕುಮಾರ್ ಅವರನ್ನು ಭೇಟಿಯಾದರು. ಇಬ್ಬರ ನಡುವೆ ಪ್ರೀತಿ ಚಿಗುರಿತು. ಆದರೆ, ಈ ಪ್ರೀತಿಗೆ ಲೀನಾ ಅವರ ಕುಟುಂಬದ ಒಪ್ಪಿಗೆ ಇರಲಿಲ್ಲ. ಏಕೆಂದರೆ, ಕಿಶೋರ್ ಅವರು ಲೀನಾಗಿಂತ 20 ವರ್ಷ ದೊಡ್ಡವರು. ಆದರೆ, ವಿರೋಧವನ್ನು ಲೆಕ್ಕಿಸದೇ ಲೀನಾ ಅವರು ಕಿಶೋರ್ ಅವರನ್ನು ವಿವಾಹವಾದರು. ದಂಪತಿಗೆ ಸುಮೀತ್ ಕುಮಾರ್ ಹೆಸರಿನ ಮಗನಿದ್ದಾನೆ. (ಏಜೆನ್ಸೀಸ್)