ಟೀಮ್​ ಇಂಡಿಯಾ 370 ರನ್‌ ರಕ್ಷಿಸಿಕೊಳ್ಳುತ್ತಾ? ಹೆಡಿಂಗ್ಲಿಯಲ್ಲಿ ಚೇಸ್​ ಮಾಡಿದ ಬೃಹತ್​ ಗುರಿ ಯಾವುದು? ENG vs IND

ENG vs IND
Published on

ENG vs IND : ಇಂಗ್ಲೆಂಡ್​ನ ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ, ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ 371 ರನ್‌ಗಳ ಗುರಿಯನ್ನು ನೀಡಿದೆ. ಗುರಿಯನ್ನು ಬೆನ್ನಟ್ಟಿದ ಆಂಗ್ಲ ಪಡೆದ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ಬೆನ್ ಡಕೆಟ್ (9) ಮತ್ತು ಜ್ಯಾಕ್ ಕ್ರಾಲಿ (12) ಕ್ರೀಸ್‌ನಲ್ಲಿದ್ದಾರೆ. ಕೊನೆಯ ದಿನವಾದ ಇಂದು ಇಂಗ್ಲೆಂಡ್ ಗೆಲ್ಲಲು 350 ರನ್‌ಗಳ ಅಗತ್ಯವಿದೆ. ಅದೇ ರೀತಿ ಭಾರತ ಗೆಲ್ಲಲು 10 ವಿಕೆಟ್‌ಗಳನ್ನು ಪಡೆಯಬೇಕಾಗಿದೆ.

ಪಂದ್ಯ ಕುತೂಹಲ ಘಟ್ಟದಲ್ಲಿದ್ದು ಹೆಡಿಂಗ್ಲಿಯಲ್ಲಿ ಇದುವರೆಗೆ ಚೇಸ್​ ಮಾಡಲಾದ ಬೃಹತ್​ ಗುರಿ ಯಾವುದು ಎಂಬುದರ ಮೇಲೆ ಇದೀಗ ಎಲ್ಲರ ಕಣ್ಣುಗಳು ನೆಟ್ಟಿವೆ. ಅಂದಹಾಗೆ, ಹೆಡಿಂಗ್ಲಿಯಲ್ಲಿ ಚೇಸ್​ ಮಾಡಿದ ಅತ್ಯಧಿಕ ಯಶಸ್ವಿ ಗುರಿ 404 ರನ್‌ಗಳು. ಇದನ್ನು ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಬೆನ್ನಟ್ಟಿತ್ತು. 1948ರ ಆಶಸ್ ಸರಣಿಯಲ್ಲಿ ಆಸೀಸ್ ಈ ಗುರಿಯನ್ನು ಬೆನ್ನಟ್ಟಿತು. ಆಗಿನ ಆಸೀಸ್ ನಾಯಕ, ದಂತಕಥೆ ಡಾನ್ ಬ್ರಾಡ್ಮನ್ 173 ರನ್​ ಗಳಿಸಿ, ಅಜೇಯರಾಗಿ ಉಳಿಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರೊಂದಿಗೆ, ಆಸೀಸ್ ಏಳು ವಿಕೆಟ್‌ಗಳಿಂದ ಗೆದ್ದಿತು.

ಬೃಹತ್​ ಗುರಿ ಬೆನ್ನಟ್ಟಿದ ಎರಡನೇ ದಾಖಲೆ ಇಂಗ್ಲೆಂಡ್ ಹೆಸರಿನಲ್ಲಿದೆ. 2019ರ ಆಶಸ್ ಸರಣಿಯ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 359 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಪ್ರಸ್ತುತ ನಾಯಕ ಬೆನ್ ಸ್ಟೋಕ್ಸ್ 135 ರನ್‌ಗಳ ಅಜೇಯ ಇನ್ನಿಂಗ್ಸ್‌ನೊಂದಿಗೆ ಇಂಗ್ಲೆಂಡ್‌ಗೆ ಅದ್ಭುತ ಗೆಲುವು ತಂದುಕೊಟ್ಟರು. ಕೊನೆಯ ವಿಕೆಟ್‌ಗೆ ಜ್ಯಾಕ್ ಲೀಚ್ ಅವರೊಂದಿಗೆ ಸೇರಿ 76 ರನ್‌ಗಳ ಅಜೇಯ ಜೊತೆಯಾಟದೊಂದಿಗೆ ತಂಡದ ಗೆಲುವಿಗೆ ಸ್ಟೋಕ್ಸ್ ನೆರವಾದರು.

ಹೆಡಿಂಗ್ಲಿಯಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತ್ಯಂತ ಯಶಸ್ವಿ ಚೇಸಿಂಗ್​ಗಳಿವು...

* ಆಸ್ಟ್ರೇಲಿಯಾ v ಇಂಗ್ಲೆಂಡ್ (1948) - 404 ರನ್​ಗಳು

* ಇಂಗ್ಲೆಂಡ್ v ಆಸ್ಟ್ರೇಲಿಯಾ (2019) - 359 ರನ್​ಗಳು

* ಇಂಗ್ಲೆಂಡ್ v ವೆಸ್ಟ್ ಇಂಡೀಸ್ (2017) - 322 ರನ್​ಗಳು

* ಇಂಗ್ಲೆಂಡ್ v ಆಸ್ಟ್ರೇಲಿಯಾ (2001) - 315 ರನ್​ಗಳು

* ಇಂಗ್ಲೆಂಡ್ v ನ್ಯೂಜಿಲೆಂಡ್ (2022) - 296 ರನ್​ಗಳು

ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆದ್ದು 1-0 ಮುನ್ನಡೆ ಸಾಧಿಸುವ ಗುರಿ ಹೊಂದಿರುವ ಇಂಗ್ಲೆಂಡ್ ಪಡೆ, ಹೆಡಿಂಗ್ಲಿಯಲ್ಲಿ ಎರಡನೇ ಅತ್ಯುನ್ನತ ಗುರಿಯನ್ನು ಬೆನ್ನಟ್ಟಬೇಕಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net