ಇಸ್ರೇಲ್ ಜೊತೆ ಕದನ ವಿರಾಮದ ಸುಳಿವು ನೀಡಿದ ಇರಾನ್: 12 ದಿನಗಳ ಯುದ್ಧ ಕೊನೆಗೂ ಅಂತ್ಯ! Iran vs Israel

Iran vs Israel
Published on

Iran vs Israel : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಬ್ಬರು ದೀರ್ಘಕಾಲದ ಶತ್ರುಗಳ ನಡುವೆ ಸಂಪೂರ್ಣ ಕದನ ವಿರಾಮ ಘೋಷಿಸಿದ ಕೆಲವೇ ಗಂಟೆಗಳ ಬೆನ್ನಲ್ಲೇ ಇರಾನ್ ಮಂಗಳವಾರ (ಜೂನ್​ 24) ಇಸ್ರೇಲ್ ಜೊತೆ ಕದನ ವಿರಾಮದ ಸುಳಿವು ನೀಡಿದೆ. ಇರಾನ್ ವಿದೇಶಾಂಗ ಸಚಿವ ಸೈಯದ್​ ಅಬ್ಬಾಸ್ ಅರಘ್ಚಿ, ಕೊನೆಯ ಕ್ಷಣದವರೆಗೂ ಹೋರಾಡಿದ್ದಕ್ಕಾಗಿ ಟೆಹರಾನ್​ನ ಸಶಸ್ತ್ರ ಪಡೆಗಳಿಗೆ ಎಕ್ಸ್​ ಖಾತೆಯ ಮೂಲಕ ಧನ್ಯವಾದ ಅರ್ಪಿಸಿದ್ದು, ಯುದ್ಧದ ಅಂತ್ಯದ ಸೂಚನೆ ನೀಡಿದ್ದಾರೆ.

ಇಸ್ರೇಲ್‌ನ ಆಕ್ರಮಣಕ್ಕೆ ತಕ್ಕ ಶಿಕ್ಷೆ ವಿಧಿಸಲು ನಮ್ಮ ಪ್ರಬಲ ಸಶಸ್ತ್ರ ಪಡೆಗಳ ಮಿಲಿಟರಿ ಕಾರ್ಯಾಚರಣೆಗಳು ಕೊನೆಯ ನಿಮಿಷದವರೆಗೆ ಅಂದರೆ, ಬೆಳಗ್ಗೆ 4 ಗಂಟೆಯವರೆಗೂ ಮುಂದುವರೆದವು. ನಮ್ಮ ಪ್ರೀತಿಯ ದೇಶವನ್ನು ತಮ್ಮ ಕೊನೆಯ ರಕ್ತದ ಹನಿಯವರೆಗೂ ರಕ್ಷಿಸಲು ಸಿದ್ಧರಾಗಿರುವ ಮತ್ತು ಶತ್ರುಗಳ ಯಾವುದೇ ದಾಳಿಗೆ ಕೊನೆಯ ಕ್ಷಣದವರೆಗೂ ಪ್ರತಿಕ್ರಿಯಿಸಿದ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ಎಲ್ಲ ಇರಾನಿಯನ್ನರೊಂದಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.

ಇದಕ್ಕೂ ಮುನ್ನ ಟ್ವೀಟ್​ ಮಾಡಿದ್ದ ಅರಘ್ಚಿ, ಇರಾನ್ ಪದೇ ಪದೆ ಸ್ಪಷ್ಟಪಡಿಸಿದಂತೆ, ಇಸ್ರೇಲ್ ಮೊದಲು ಇರಾನ್ ಮೇಲೆ ಯುದ್ಧ ಆರಂಭಿಸಿತು. ಸದ್ಯಕ್ಕೆ, ಯಾವುದೇ ಕದನ ವಿರಾಮ ಅಥವಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಬಗ್ಗೆ ಯಾವುದೇ "ಒಪ್ಪಂದ" ಇಲ್ಲ. ಆದಾಗ್ಯೂ, ಇಸ್ರೇಲ್ ಆಡಳಿತವು ಇರಾನ್ ಜನರ ವಿರುದ್ಧ ತನ್ನ ಕಾನೂನುಬಾಹಿರ ಆಕ್ರಮಣವನ್ನು ಟೆಹರಾನ್​ನ ಸಮಯ ಬೆಳಗ್ಗೆ 4 ಗಂಟೆಯೊಳಗೆ ನಿಲ್ಲಿಸಿದರೆ, ನಂತರ ನಮ್ಮ ಪ್ರತಿದಾಳಿಯನ್ನು ಮುಂದುವರಿಸುವ ಉದ್ದೇಶ ನಮಗಿಲ್ಲ ಎಂದು ಹೇಳಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ತಮ್ಮ ಸೇನೆಗೆ ಧನ್ಯವಾದ ಸಲ್ಲಿಸುವ ಮೂಲಕ ಕದನ ವಿರಾಮದ ಸುಳಿವು ನೀಡಿದ್ದಾರೆ. ಈ ಮೂಲಕ 12 ದಿನಗಳ ಯುದ್ಧಕ್ಕೆ ಕೊನೆಗೂ ತೆರೆಬಿದ್ದಂತಾಗಿದೆ.

ಟ್ರಂಪ್​ ಘೋಷಣೆ

ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕದನ ವಿರಾಮ ಘೋಷಣೆ ಮಾಡಿದ್ದರು. ತಮ್ಮ ಸಾಮಾಜಿಕ ಜಾಲತಾಣ ಟ್ರೂತ್​ನಲ್ಲಿ ಬರೆದುಕೊಂಡಿರುವ ಟ್ರಂಪ್​, ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಕದನ ವಿರಾಮ ನಡೆಯಲಿದೆ. ಕದನ ವಿರಾಮಕ್ಕೆ ಎರಡೂ ದೇಶಗಳು ಸಂಪೂರ್ಣವಾಗಿ ಒಪ್ಪಿಕೊಂಡಿವೆ. 12 ದಿನಗಳ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ. ಪ್ರತಿಯೊಂದು ಕದನ ವಿರಾಮದ ಸಮಯದಲ್ಲಿ, ಇನ್ನೊಂದು ಕಡೆಯವರು ಶಾಂತಿಯುತ ಮತ್ತು ಗೌರವಯುತವಾಗಿರುತ್ತಾರೆಂದು ಟ್ರಂಪ್​ ಒತ್ತಿ ಹೇಳಿದರು. ಅಲ್ಲದೇ, ಎರಡೂ ದೇಶಗಳನ್ನು ಟ್ರಂಪ್​ ಅಭಿನಂದಿಸಿದರು.

ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಇಸ್ರೇಲ್ ಮತ್ತು ಇರಾನ್ ತೋರಿದ ಸಹಿಷ್ಣುತೆ, ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಅಮೆರಿಕ ಅಧ್ಯಕ್ಷರು ಶ್ಲಾಘಿಸಿದರು. ಇದು ವರ್ಷಗಳ ಕಾಲ ನಡೆಯಬಹುದಾದ ಯುದ್ಧ ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು, ಆದರೆ, ಅದು ಆಗಲಿಲ್ಲ ಮತ್ತು ಎಂದಿಗೂ ಆಗುವುದಿಲ್ಲ! ದೇವರು ಇಸ್ರೇಲ್ ಅನ್ನು ಆಶೀರ್ವದಿಸಲಿ, ದೇವರು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಆಶೀರ್ವದಿಸಲಿ ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ ಎಂದು ಟ್ರಂಪ್​ ಹೇಳಿದ್ದಾರೆ. ಆದರೆ, ಟ್ರಂಪ್​ ಅವರ ಕದನ ವಿರಾಮದ ಹಕ್ಕುಗಳಿಗೆ ಇಸ್ರೇಲ್ ಆಗಿನ್ನೂ ಪ್ರತಿಕ್ರಿಯಿಸಿರಲಿಲ್ಲ.

ಇರಾನ್‌ನ ಕದನ ವಿರಾಮ ಸುಳಿವುಗೆ ಅಮೆರಿಕ ಪ್ರತಿಕ್ರಿಯೆ

ಇಸ್ರೇಲ್ ಜೊತೆಗಿನ ಕದನ ವಿರಾಮದ ಬಗ್ಗೆ ಇರಾನ್ ಸುಳಿವು ನೀಡಿದ ಸ್ವಲ್ಪ ಸಮಯದ ಬೆನ್ನಲ್ಲೇ, ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಇದನ್ನು ಟ್ರಂಪ್ ಮಾತ್ರ ಸಾಧಿಸಬಹುದಾದ "ಐತಿಹಾಸಿಕ ಕದನ ವಿರಾಮ ಒಪ್ಪಂದ" ಎಂದು ಬಣ್ಣಿಸಿದ್ದಾರೆ. ನಮ್ಮನ್ನು ಶಾಂತಿಗೆ ಹತ್ತಿರ ತರುವ ಈ ಐತಿಹಾಸಿಕ ಕದನ ವಿರಾಮ ಒಪ್ಪಂದವನ್ನು ಅಧ್ಯಕ್ಷ ಟ್ರಂಪ್ ಮಾತ್ರ ಸಾಧಿಸಬಹುದಿತ್ತು. ಇದು ಇಸ್ರೇಲ್, ಇರಾನ್, ಮಧ್ಯಪ್ರಾಚ್ಯ, ಅಮೆರಿಕ - ಇಡೀ ಪ್ರಪಂಚದ ಎಲ್ಲಾ ಜನರ ಕೃತಜ್ಞತೆಗೆ ಅರ್ಹವಾದ ಒಂದು ಅದ್ಭುತ ಪ್ರಯತ್ನವಾಗಿತ್ತು. ಅಭಿನಂದನೆಗಳು ಮತ್ತು ಧನ್ಯವಾದಗಳು ಡೊನಾಲ್ಡ್​ ಟ್ರಂಪ್​ ಎಂದು ಗಬ್ಬಾರ್ಡ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net