ನ್ಯೂಸ್

VIDEO | ಪೆಟ್ರೋಮ್ಯಾಕ್ಸ್​ಗೂ ಈ ಕುಟುಂಬಕ್ಕೂ ಇದೆ 150 ವರ್ಷಗಳ ನಂಟು!; ಇದು ಊರು ಬೆಳಗುತ್ತಿದ್ದ ಬೆಳಕಿನ ಕಥೆ

ಬಾಗಲಕೋಟೆ: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಪ್ರತಿಯೊಬ್ಬರಿಗೂ ಬೆಳಕಿನ ಸಂಭ್ರಮ ಕಣ್ಮುಂದೆ ಬರುತ್ತದೆ. ಬೆಳಕು ಎಂದ ಕೂಡಲೇ ನಮ್ಮ ಪೂರ್ವಜರ ಕಾಲದಲ್ಲಿ ಬಳಸುತ್ತಿದ್ದ ಪೆಟ್ರೋಮ್ಯಾಕ್ಸ್ ತಕ್ಷಣಕ್ಕೆ ನೆನಪಾಗುತ್ತದೆ. ಅಂದಿನ ಕಾಲಘಟ್ಟದಲ್ಲಿ ಇಂದಿನಂತೆ ವಿದ್ಯುತ್​ ಬಳಕೆಯ ಲೈಟ್​, ಬಲ್ಬ್​ ಮೂಲಕ ಬೆಳಕಿರಲಿಲ್ಲ. ಕೇವಲ ಸೀಮೆಎಣ್ಣೆ ಅಥವಾ ಪೆಟ್ರೋಮ್ಯಾಕ್ಸ್ ಅನ್ನು ಅತೀ ಹೆಚ್ಚಾಗಿ ಬಳಸಲಾಗುತ್ತಿತ್ತು. ಇದೀಗ ಈ ಪೆಟ್ರೋಮ್ಯಾಕ್ಸ್ ವಿಷಯ​ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಬ್ರಿಟಿಷರ ಆಳ್ವಿಕೆಯಲ್ಲಿ ಪೆಟ್ರೋಮ್ಯಾಕ್ಸ್​ ಅನ್ನು ಬಾಡಿಗೆಗೆ ಕೊಡುತ್ತಿದ್ದ ಬಾಗಲಕೋಟೆಯ ಕುಟುಂಬವೊಂದರ ಕಥೆ ಇಲ್ಲಿದೆ ನೋಡಿ.

ಪೆಟ್ರೋಮ್ಯಾಕ್ಸ್ ವೈಭವ ಇಂದು ಮರೆಯಾಗಿ ವಸ್ತುಸಂಗ್ರಹದ ಸರಕಾಗಿದ್ದರೂ ಕೂಡ ಇದು ಬಾಗಲಕೋಟೆಯಲ್ಲಿ ರಾಜಪ್ಪ ಕಲಾಲ ಎಂಬುವವರ ಕುಟುಂಬದಲ್ಲಿ ಇಂದಿಗೂ ನೆನಪಿಗಾಗಿ ಗ್ಯಾಸ್ ಕುರುಹುಗಳು ಇವೆ. ಈ ಕುಟುಂಬಕ್ಕೂ ಪೆಟ್ರೋಮ್ಯಾಕ್ಸ್​ಗೂ 150 ವರ್ಷದ ನಂಟಿದೆ. ರಾಜಪ್ಪ ಕಲಾಲ ಎನ್ನುವವರು ಬ್ರಿಟಿಷರ ಆಳ್ವಿಕೆಯಲ್ಲಿ ಈ ಪೆಟ್ರೋಮ್ಯಾಕ್ಸ್​ಗಳನ್ನು ಬಾಡಿಗೆ ಕೊಡುತ್ತಿದ್ದರು.

ಆ ಕಾಲದಲ್ಲಿ ಬಾಗಲಕೋಟೆಯಲ್ಲಿ ಇನ್ನೂ ಬೀದಿ ದೀಪಗಳೇ ಇರಲಿಲ್ಲ. ಗಲ್ಲಿಗಳಲ್ಲಿ ಕಂಬ ಹಾಕಿ ಅದಕ್ಕೆ ಪೆಟ್ರೋಮ್ಯಾಕ್ಸ್ ಸೀಮೆ ಎಣ್ಣೆ ದೀಪ ಹಾಕುತ್ತಿದ್ದರು. ಇದನ್ನು ಗುತ್ತಿಗೆಗೆ ನೀಡಲಾಗುತ್ತಿತ್ತು. ಹೀಗೆ ಪೆಟ್ರೋಮ್ಯಾಕ್ಸ್ ಬೀದಿ ದೀಪದ ಗುತ್ತಿಗೆ ಪಡೆದವರಲ್ಲಿ ಒಬ್ಬರು ಈ ಕಲಾಲ ರಾಜಪ್ಪ. ಮೇಡ್ ಇನ್ ಜರ್ಮನಿಯ 100ಕ್ಕೂ ಅಧಿಕ ಪೆಟ್ರೋಮ್ಯಾಕ್ಸ್ ಗ್ಯಾಸ್ ಅನ್ನು ರಾಜಪ್ಪ ಹೊಂದಿದ್ದರು. ರಾಜಪ್ಪ ನಂತರ ಹೂವಪ್ಪ ಅದನ್ನು ಮುಂದುವರೆಸಿದರು.

ವಿದ್ಯುತ್ ಬೀದಿ ದೀಪ, ಮನೆಗಳಿಗೆ ಕರೆಂಟ್ ಬಂದ ಬಳಿಕ ಮೆಟ್ರೋಮ್ಯಾಕ್ಸ್ ಮರೆಯಾಯಿತು. ಹೂವಪ್ಪ ಅವರ ಬಳಿಕ ಅವರ ಪುತ್ರ ಮಲ್ಲಿಕಾರ್ಜುನ ವಯಸ್ಸಿಗೆ ಬಂದಾಗ ಪೆಟ್ರೋಮ್ಯಾಕ್ಸ್ ಜಾಗದಲ್ಲಿ ಕೈ ಗ್ಯಾಸ್​ಗಳು ಬಂದಿತ್ತು. ಕೆಲ ವರ್ಷಗಳವರೆಗೂ ಹಬ್ಬ, ಹರಿದಿನ, ಮದುವೆ, ನಾಟಕಗಳಿಗೆ ಇದೇ ಗ್ಯಾಸ್​ಗಳನ್ನು ಬಾಡಿಗೆ ತೆಗೆದುಕೊಂಡು ಹೋಗುತ್ತಿದ್ದರು.

ಇದೀಗ ಸೀಮೆ ಎಣ್ಣೆ ಬಂದ್ ಆಗಿದ್ದು, ಜನರೇಟರ್​ಗಳು ರಾರಾಜಿಸುತ್ತಿವೆ. ಶತಮಾನಗಳನ್ನು ಆಳಿದ ಪೆಟ್ರೋಮ್ಯಾಕ್ಸ್​ಗಳು ಇಂದು ಮೂಲೆ ಸೇರಿವೆ. ದಿನಗಳ ಬಗ್ಗೆ ತಂದೆಯಿಂದ ಕೇಳಿ ತಿಳಿದಿದ್ದ ಮಲ್ಲಿಕಾರ್ಜುನ ಆ ದಿನಗಳನ್ನು ಈಗ ಮೆಲುಕು ಹಾಕಿದ್ದಾರೆ.

ಈಗ ಎಲ್ಲೆಡೆ ವಿದ್ಯುತ್ ದೀಪಗಳು, ಅಲಂಕಾರಿಕ ದೀಪಗಳು, ಜನರೇಟರ್ ಅಬ್ಬರಿಸುತ್ತಿದೆ. ದೀಪಾವಳಿ ಹಬ್ಬದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಬೆಳಕು ನೀಡುತ್ತಿದ್ದ ಪೆಟ್ರೋಮ್ಯಾಕ್ಸ್ ಗ್ಯಾಸ್​​ಗಳು ಈಗ ಅನಾಥವಾಗಿದೆ ಎಂದು ಮಲ್ಲಿಕಾರ್ಜುನ ಬೇಸರದಿಂದ ಹೇಳಿದ್ದಾರೆ.