More

  ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತು: ಕಾರ್ಮಿಕ ಸಚಿವ ಸಂತೋಷ್‌ ಎಸ್. ಲಾಡ್‌ ಸಂಕಲ್ಪ

  ಬೆಂಗಳೂರು: ರಾಜ್ಯದಲ್ಲಿ ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರಿಗಾಗಿ ಸೂಕ್ತ ಕಾನೂನು ರೂಪಿಸಿ ಸಾಮಾಜಿಕ ಭದ್ರತೆ ಕಲ್ಪಿಸಲಾಗುವುದು ಎಂದು ಕಾರ್ಮಿಕ ಸಚಿವರು ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಅಧ್ಯಕ್ಷರಾದ ಸಂತೋಷ್ ಎಸ್. ಲಾಡ್ ಹೇಳಿದ್ದಾರೆ.

  ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಗುರುವಾರ ನಡೆದ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಮ್ಮಿಕೊಂಡಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23 ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.

  ಕಾರ್ಮಿಕರ ಕನಿಷ್ಟ ವೇತನ ಹೆಚ್ಚಿಸಲು ಕ್ರಮ
  ನಮ್ಮ ಸರ್ಕಾರ ಬಡವರ, ಕಾರ್ಮಿಕರ ಪರವಾಗಿದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಕಾರ್ಮಿಕರ ಆಶಯಗಳಂತೆ ನಡೆಯುತ್ತಿದೆ. ಕಾರ್ಮಿಕರ ಕನಿಷ್ಟ ವೇತನವನ್ನು ಹೆಚ್ಚಿಸುವ ಪ್ರಸ್ತಾವನೆ ಕೂಡ ಸರ್ಕಾರದ ಮುಂದಿದ್ದು, ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

  ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
  ಅಂತರ್ಜಾಲ ವೇದಿಕೆ ಆಧಾರಿತ ಸೇವೆಯಲ್ಲಿ ಆಹಾರ ತಲುಪಿಸುವುದು, ಸರಕು ಸಾಗಾಣಿಕೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಗಿಗ್‌ ವರ್ಕರ್ಸ್‌ ಗೆ ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸಿದ ಎರಡನೇ ರಾಜ್ಯ ಕರ್ನಾಟಕವಾಗಿದ್ದು, ಮೊದಲ ಸ್ಥಾನದಲ್ಲಿ ರಾಜಸ್ತಾನವಿದೆ. ನಮ್ಮ ರಾಜ್ಯದಲ್ಲಿ 4 ರಿಂದ 5 ಲಕ್ಷ ಗಿಗ್‌ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದರು.

  ಬರೀ 6 ತಿಂಗಳಲ್ಲೇ ಹಲವು ಯೋಜನೆ ಜಾರಿ
  ಕೇಂದ್ರ ಸರ್ಕಾರದ ಪ್ರಕಾರ 390 ಅಸಂಘಟಿತ ವಲಯಗಳಿದ್ದು, 1.80 ಕೋಟಿ ಕಾರ್ಮಿಕರಿದ್ದಾರೆ. ಆದರೆ, ರಾಜ್ಯ ಸರ್ಕಾರದ ಪ್ರಕಾರ 43 ಸಾವಿರ ಅಸಂಘಟಿತ ವಲಯಗಳಿವೆ. ಅಸಂಘಟಿತ ವಲಯದ ಕಾರ್ಮಿಕರ ಪೈಕಿ 55 ಲಕ್ಷ ಮಂದಿಗೆ 6 ತಿಂಗಳಲ್ಲಿ ಸಾಕಷ್ಟು ಯೋಜನೆಗಳನ್ನು ತಲುಪಿಸಲಾಗಿದೆ ಎಂದರು. ಆಸ್ತಿ ತೆರಿಗೆಯಲ್ಲಿ ಸಂಗ್ರಹಿಸಿದ ತೆರಿಗೆಯ ಪಾಲನ್ನು ಕಾರ್ಮಿಕ ಇಲಾಖೆಗೆ ನೀಡಿದರೆ ಇನ್ನಷ್ಟು ಅನುಕೂಲವಾಗಲಿದೆ. ಬೀದಿಬದಿ ವ್ಯಾಪಾರಿಗಳು, ರೆಸ್ಟೋರೆಂಟ್‌, ಗಾರ್ಮೆಂಟ್ಸ್‌ ವರ್ಕರ್ಸ್‌ಗೆ ಅನುಕೂಲ ಮಾಡಿಕೊಡಬಹುದು ಎಂದು ಹೇಳಿದರು.

  ಸಾರಿಗೆ ಕಲ್ಯಾಣ ಮಂಡಳಿ ಸ್ಥಾಪನೆಗೆ ಚರ್ಚೆ
  ವಿಶೇಷವಾಗಿ ಸಾರಿಗೆ ವಲಯದಲ್ಲಿ 35 ಲಕ್ಷ ವಾಣಿಜ್ಯ ಬಳಕೆಯ ವಾಹನ ಚಾಲಕರು ಮತ್ತು ಇದಲ್ಲದೇ ಗ್ಯಾರೇಜ್ ಮೆಕ್ಯಾನಿಕ್‌, ಕ್ಲೀನರ್ಸ್‌ ಗಳಿದ್ದಾರೆ. ಈ ವಲಯದಲ್ಲಿ ಕಲ್ಯಾಣ ಕಾರ್ಯಕ್ರಮಗಳ ಅನುಕೂಲಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸಾರಿಗೆ ಸಚಿವರೊಂದಿಗೂ ಚರ್ಚಿಸಲಾಗಿದೆ. ಶೇ. 11 ರ ಸೆಸ್‍ನಲ್ಲಿ ಶೇ.27ರಷ್ಟು ಸಾರಿಗೆ ಮಂಡಳಿಗೆ ಸೆಸ್ ನೀಡಲು ಕೇಳಿದ್ದು, ಈ ಮೂಲಕ ಸಾರಿಗೆ ಕಲ್ಯಾಣ ಮಂಡಳಿ ಸ್ಥಾಪನೆ ಮಾಡುವ ಮೂಲಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದರು. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಅಸಲು 10,536 ಕೋಟಿ ರೂಪಾಯಿ ಸೇರಿ ಸದ್ಯ 13 ಸಾವಿರ ಕೋಟಿ ರೂಪಾಯಿ ಇದೆ. ಇದರಲ್ಲಿ 6 ಸಾವಿರ ಕೋಟಿ ಖರ್ಚಾಗಿದೆ. ಇನ್ನೂ 6 ಸಾವಿರದ 600 ಕೋಟಿ ಹಣ ಉಳಿದಿದೆ ಎಂದು ಸಚಿವರು ತಿಳಿಸಿದರು.

  ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 40 ಲಕ್ಷ ಕಾರ್ಮಿಕರ ಕಾರ್ಡ್‌ ಗಳನ್ನು ನೀಡಲಾಗಿದೆ. ಈ ಪೈಕಿ ಶೇ.60ರಷ್ಟು ಕಾರ್ಡ್‌ ಗಳು ನಕಲಿಯಾಗಿವೆ. ನಕಲಿ ಕಾರ್ಡ್‌ ಗಳನ್ನು ತಡೆಯಲು ಆಪ್‌ ಅಭಿವೃದ್ಧಿಪಡಿಸಲಾಗಿದೆ. ಹೊಸದಾಗಿ 13 ಲಕ್ಷ ಹೊಸ ಅರ್ಜಿಗಳು ಬಂದಿವೆ. ಅರ್ಹರಿಗೆ ಸೌಲಭ್ಯ ದೊರಕಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

  ಸೆಸ್‌ ಸಂಗ್ರಹಕ್ಕೆ ʻಜಿಯೋ ಮ್ಯಾಪಿಂಗ್‌ʼ
  ರಾಜ್ಯದಲ್ಲಿ ಸೆಸ್‌ ಸಂಗ್ರಹ 1000 ಕೋಟಿ ರೂಪಾಯಿ ಇದ್ದು, ಇನ್ನು ಸೆಸ್‌ ಸಂಗ್ರಹ ಹೆಚ್ಚಿಸಲು ಜಿಯೋ ಮ್ಯಾಪಿಂಗ್‌ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಸೆಸ್‌ ಮೊತ್ತ ಬಂದಿಲ್ಲ. ಆದರೂ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಕೊಡುತ್ತಿರುವ ಕಲ್ಯಾಣ ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆಗೂ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದು ಸಚಿವರು ತಿಳಿಸಿದರು.

  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭ ಉದ್ಘಾಟಿಸಿದರು. ನಂತರ, ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಪಾವತಿಗೆ ಚಾಲನೆ ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.

  ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ. ಕೆ. ಗೋವಿಂದರಾಜು, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಮೊಹಮ್ಮದ್ ಮೊಹಿಸೀನ್, ಕಾರ್ಮಿಕ ಇಲಾಖೆಯ ಆಯುಕ್ತ ಡಾ. ಎಚ್. ಎನ್. ಗೋಪಾಲಕೃಷ್ಣ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಡಿ. ಭಾರತಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

  ಲಂಕಾ ವಿರುದ್ಧ ಕಿವೀಸ್​ ಗೆದ್ದರೂ ಪಾಕಿಸ್ತಾನಕ್ಕಿದೆ ಭಾರತದ ವಿರುದ್ಧ ಸೆಮೀಸ್​ನಲ್ಲಿ ಕಾದಾಡುವ ಅವಕಾಶ!

  ಪ್ರಶ್ನೆಗಾಗಿ ನಗದು ಪ್ರಕರಣ: ಲೋಕಸಭೆಯಿಂದ ಮಹುವಾ ಮೊಯಿತ್ರಾ ಉಚ್ಚಾಟನೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts