More

    ರಾಜ್ಯ ಸರ್ಕಾರ ಶೀಘ್ರ ಪತನ

    ರಿಪ್ಪನ್‌ಪೇಟೆ: ಕಾಂಗ್ರೆಸ್ ಶಾಸಕರಲ್ಲಿ ದಿನೇದಿನೆ ಅಸಮಾಧಾನ ಹೆಚ್ಚಾಗುತ್ತಿದ್ದು, ಕೆಲವೇ ತಿಂಗಳಲ್ಲಿ ರಾಜ್ಯ ಸರ್ಕಾರ ಪತನ ಆಗಲಿದೆ. ನಂತರ ನಮ್ಮದೇ ಪಕ್ಷ ಆಡಳಿತಕ್ಕೆ ಬರಲಿದೆ ಎಂದು ಲೋಕಸಭೆ ಚುನಾವಣೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಭವಿಷ್ಯ ನುಡಿದರು.

    ಗರ್ತಿಕೆರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಸರ್ಕಾರ ನಡೆಸಲು ಖಜಾನೆಯೇ ಖಾಲಿ ಆಗಿದ್ದು, ಶಾಸಕರಿಗೆ ಈವರೆಗೂ ಅಭಿವೃದ್ಧಿ ಅನುದಾನ ನೀಡಿಲ್ಲ. ಈಗಾಗಲೇ ಅನೇಕ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಆಂತರಿಕ ಕಚ್ಚಾಟದಿಂದ ಸರ್ಕಾರ ಪತನವಾಗಲಿದೆ. ಇದಕ್ಕಾಗಿ ಯಾವುದೇ ಆಪರೇಷನ್ ಅಗತ್ಯವಿಲ್ಲ. ಕಾದು ನೋಡಿ ಎಂದರು.
    ಲೋಕಸಭೆ ಚುನಾವಣೆ ರಾಷ್ಟ್ರೀಯ ವಿಷಯಗಳ ಮೇಲೆ ಚರ್ಚಿಸುವ ವಿಷಯ. ಆದರೆ ಕಾಂಗ್ರೆಸ್ ಅಪೂರ್ಣ ಗ್ಯಾರಂಟಿಗಳನ್ನು ಹಿಡಿದು ಪ್ರಚಾರ ಮಾಡುತ್ತಿದ್ದಾರೆ. ಕುಟುಂಬದ ಮಹಿಳೆಗೆ ಒಂದು ಲಕ್ಷ ರೂಪಾಯಿ ನೀಡುವ ಸುಳ್ಳು ಭರವಸೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನ ಕೆಲ ತಪ್ಪು ನಿರ್ಧಾರದಿಂದ ಅಖಂಡ ಭಾರತವನ್ನೇ ಈಗಾಗಲೇ ಪಾಕಿಸ್ತಾನ, ಬಾಂಗ್ಲ್ಲಾದೇಶ ಎಂದು ಒಡೆದಿದ್ದೀರಿ. ಈಗ ಮತ್ತೆ ನಿಮ್ಮ ಅಸಂಬದ್ಧ ಭರವಸೆಗಳಿಂದ ದೇಶದ ಮತ್ತ್ಯಾವ ಭಾಗವನ್ನು ಮಾರಾಟ ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದರು.
    ಶಿವಮೊಗ್ಗ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈಗಾಗಲೇ 20 ಸಾವಿರ ಕೋಟಿ ರೂ. ಅನುದಾನವನ್ನು ಶಿವಮೊಗ್ಗದ ವಿವಿಧ ಕಾಮಗಾರಿಗಳಿಗೆ ವ್ಯಯಿಸಲಾಗಿದೆ. ದೇಶದಲ್ಲಿ ಮೋದಿ ನೇತೃತ್ವದ ಆಡಳಿತದಲ್ಲಿ ಭಾರತ ಬಲಿಷ್ಠವಾಗುತ್ತಿದೆ. ವಿಶ್ವಮಟ್ಟದಲ್ಲಿ ಗೌರವ ಹೆಚ್ಚಾಗಿದೆ. ದೇಶದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒಪ್ಪುತ್ತಿದ್ದಾರೆ. ಕ್ಷೇತ್ರದ ಮತ್ತಷ್ಟು ಸೇವೆಗೆ ಕಮಲದ ಗುರುತಿಗೆ ಮತ ನೀಡಿ ಎಂದು ತಿಳಿಸಿದರು.
    ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಮಾತನಾಡಿ, ಜಾತಿ ಹೆಸರಲ್ಲಿ ಮತ ಹಾಕಬೇಕೆಂಬ ಚರ್ಚೆ ಈಡಿಗರಲ್ಲಿ ನಡೆಯುತ್ತಿದೆ. ಆದರೆ ಸಮಾಜಕ್ಕೆ ಕೊಡುಗೆ ನೀಡಿದವರಿಗೆ ಮತ ಹಾಕಬೇಕೋ ಅಥವಾ ಸಮಾಜವನ್ನು ಮುಳುಗಿಸಿದವರಿಗೆ ಮತ ನೀಡಬೇಕೋ ಎಂಬುದನ್ನು ನಿರ್ಧರಿಸುವ ಅಗತ್ಯವಿದೆ. ಈಡಿಗ ಸಮಾಜದ ಆಸ್ತಿ ಕೊಳ್ಳೆ ಹೊಡೆದವರು ಈಗ ಕಾಂಗ್ರೆಸ್ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಸಮಾಜಕ್ಕೆ ಉಪಯೋಗವಿಲ್ಲದ ಅಭ್ಯರ್ಥಿ ಬೇಕಾ ಎಂದು ಆಲೋಚಿಸಬೇಕು ಎಂದರು.
    ಶಾಸಕ ಆರಗ ಜ್ಞಾನೇಂದ್ರ, ತಾಪಂ ಮಾಜಿ ಅಧ್ಯಕ್ಷ ಆಲುವಳ್ಳಿ ವೀರೇಶ, ಮಲ್ಲಿಕಾರ್ಜುನ ಹಕ್ರೆ, ಬಿಜೆಪಿ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ, ಶಕ್ತಿ ಕೇಂದ್ರದ ಅಧ್ಯಕ್ಷ ವಿನಾಯಕ, ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್, ಜಿಲ್ಲಾ ಜೆಡಿಎಸ್ ಮಹಿಳಾ ಅಧ್ಯಕ್ಷೆ ಗೀತಾ ಸತೀಶ್, ಹರಿಕೃಷ್ಣ, ಆರ್.ಟಿ.ಗೋಪಾಲ, ಉಮೇಶ ಕಂಚಿಗಾರ್, ಪುರುಷೋತ್ತಮ ರಾವ್, ಬಂಡಿ ದಿನೇಶ, ಸುರೇಶ್ ಸಿಂಗ್, ಯುವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts