Supporters of Karnataka Congress Senior Leader DK Shivakumar celebrate by bursting crackers and greet him for his appointment as Karnataka Congress president at his residence in Sadashivnagar, in Bengaluru on Wednesday 11th March 2020 Pics: www.pics4news.com 
ನ್ಯೂಸ್

ನೀಚ ರಾಜಕಾರಣ ನನ್ನ ರಕ್ತದಲ್ಲೇ ಇಲ್ಲ, ಮಧ್ಯರಾತ್ರಿ ಸಿಎಂ ಬಳಿ ಹೋಗಿದ್ದನ್ನು ಸಾಬೀತು ಮಾಡಿ...

arunakunigal

ಬೆಂಗಳೂರು: ಮಧ್ಯರಾತ್ರಿ ವೇಳೆ ನಾನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಪುಟ ಸಹೋದ್ಯೋಗಿಗಳನ್ನು ಭೇಟಿ ಮಾಡಿಲ್ಲ. ಹಾಗೇನಾದರೂ ಅವರನ್ನು ನಾನು ಭೇಟಿ ಮಾಡಿದ್ದನ್ನು ಸಾಬೀತು ಪಡಿಸಿದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ. ನೀಚ ರಾಜಕಾರಣ ನನ್ನ ರಕ್ತದಲ್ಲಿಯೇ ಇಲ್ಲ. ನಿಮಗೆ ಪೊಲಿಟಿಕಲ್ ಪ್ರಾಬ್ಲಂ ಇರಬಹುದು, ನನಗೆ ಯಾವುದೇ ಪೊಲಿಟಿಕಲ್ ಪ್ರಾಬ್ಲಂ ಇಲ್ಲ ಎಂದು ಎಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಡಿಕೆಶಿ, ಡಿ.8ರಂದು ನಡೆದ ಭಾರತ್​ ಬಂದ್ ವೇಳೆ ಹಸಿರು ಶಾಲು ಧರಿಸಿ ರೈತರ ಪರವಾಗಿ ಫ್ರೀಡಂ ಪಾರ್ಕ್​ವರೆಗೆ ಮೆರವಣಿಗೆ ಹೋಗುವ ಮೂಲಕ ರೈತರಿಗೆ ಬೆಂಬಲ ನೀಡಿದ್ದೆವು. ನಾವು ಹಸಿರು ಶಾಲು ಹಾಕಿಕೊಂಡು ಹೋಗಿದ್ದಕ್ಕೆ ಕುಮಾರಸ್ವಾಮಿ ಟೀಕಿಸಿದ್ದಾರೆ. 'ಕಾಂಗ್ರೆಸ್ ಶಾಲಿಗೆ ಶಕ್ತಿ ಹೋಗಿದೆ. ಬೆಲೆ ಇಲ್ಲ, ಅದಕ್ಕೆ ಹಸಿರು ಶಾಲು ಧರಿಸಿ ರಾಜಕಾರಣ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದರು. ಕೆಪಿಸಿಸಿ ಅಧ್ಯಕ್ಷನಾಗಿ ಇಂತಹ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ. ನಮ್ಮ ಈ ಶಾಲು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ. ಇಂದು ಪ್ರಧಾನಮಂತ್ರಿ, ಮುಖ್ಯಮಂತ್ರಿಗಳನ್ನು ಸೃಷ್ಟಿಸಿದೆ ಎಂದು ಎಚ್​ಡಿಕೆಗೆ ಮಾತಿನಲ್ಲೇ ಡಿಕೆಶಿ ತಿವಿದರು.

ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಇಬ್ಬರೂ ಒಂದೇ ವಿಮಾನದಲ್ಲಿ ವಿಮಾನ ಪ್ರಯಾಣ ಮಾಡಿದ್ದೆವು. ವಿಮಾನದಲ್ಲಿ ಪ್ರಯಾಣಿಸಿದಾಗ ಕುಶಲೋಪರಿ ಸಹಜ. ಆದರೆ, ಆಗಲೂ ಅದಕ್ಕೆ ಬೇರೆ ಬಣ್ಣ ಕಟ್ಟಲಾಗಿತ್ತು. ಕದ್ದುಮುಚ್ಚಿ ರಾಜಕೀಯ ಮಾಡುವ ನೀಚ ರಾಜಕಾರಣ ನನ್ನ ರಕ್ತದಲ್ಲಿಲ್ಲ ಎಂದ ಡಿಕೆಶಿ, ಮಧ್ಯರಾತ್ರಿ ಹೋಗಿ‌ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ ಎಂದು ಎಚ್​​ಡಿಕೆ ಆರೋಪ ಮಾಡಿದ್ದಾರೆ. ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಯಡಿಯೂರಪ್ಪ ಅಥವಾ ಯಾವುದೇ ಸಚಿವರನ್ನು ಮಧ್ಯರಾತ್ರಿ ಭೇಟಿ ಮಾಡಿ ಕೆಲಸ ಮಾಡಿಸಿಕೊಂಡಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದರು.

ಇನ್ನು ಕೋಲಾರದಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಎಚ್​ಡಿಕೆ ಮಾತನಾಡುತ್ತ, ಕಾಂಗ್ರೆಸ್​ ತರಹ ನಾವು ಡಬಲ್ ಗೇಮ್ ರಾಜಕೀಯ ಮಾಡಲ್ಲ. ಈಗ ಕಾಂಗ್ರೆಸ್ ಶಾಲಿಗೂ ಬೆಲೆಯಿಲ್ಲ, ಹಾಗಾಗಿ ಹಸಿರು ಶಾಲು ಹಾಕಿಕೊಂಡು ಹೋಗಿದ್ದಾರೆ. ರೈತರನ್ನು ಉಳಿಸಿಕೊಳ್ಳಲು ನಮ್ಮ ಪಕ್ಷದಿಂದ ಬಳುವಳಿ ಕೊಟ್ಟಿದ್ದೇವೆ. ಹೋರಾಟ ಮಾಡೋದ್ರಿಂದ ಎಲ್ಲ ಸಮಸ್ಯೆ ಬಗೆಹರಿಯಲ್ಲ, ನಾನು ಬಿಜೆಪಿಗೆ ಹತ್ತಿರವಾಗಿಲ್ಲ, ಸಾಫ್ಟ್ ಕಾರ್ನರ್ ಇಟ್ಟುಕೊಂಡಿಲ್ಲ ಎಂದಿದ್ದರು. ನಾನು ಹಗಲು ವೇಳೆ ಸಿಎಂ ಯಡಿಯೂರಪ್ಪರನ್ನ ಭೇಟಿ ಮಾಡಿದ್ದೆ. ಆದ್ರೆ ಕಾಂಗ್ರೆಸ್​ನಂತೆ ರಾತ್ರಿ ವೇಳೆ ಹೋಗಿಲ್ಲ ಎಂದು ಟೀಕಿಸಿದ್ದರು. ಈ ಮಾತಿಗೆ ಸಿಡಿಮಿಡಿಗೊಂಡ ಡಿಕೆಶಿ, ಎಚ್​ಡಿಗೆ ವಿರುದ್ಧ ವಿಧಾನಸೌಧದಲ್ಲಿ ವಾಗ್ದಾಳಿ ನಡೆಸಿದರು.