ಸಾಮಾನ್ಯವಾಗಿ ಬಗೆ ಬಗೆಯ ತಿಂಡಿ-ತಿನಿಸುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹಂಚಿಕೆಯಾಗುವುದನ್ನು ನಾವು-ನೀವೆಲ್ಲಾ ನೋಡಿದ್ದೇವೆ. ನೆಟ್ಟಿಗರ ಗಮನಸೆಳೆಯುವುದನ್ನೇ ಕೆಲವರು ಮೂಲ ಬಂಡವಾಳವನ್ನಾಗಿ ಮಾಡಿಕೊಂಡಿರುವುದು ಹಾಸ್ಯಸ್ಪದ ಅನಿಸಿದರೂ ಸಹ ಅದರಿಂದ ಕೆಲವು ತಿಳಿಯದ, ಕೇಳದ, ನೋಡದ ವಿಚಿತ್ರ ವಿಷಯಗಳು ಹೊರಬೀಳುತ್ತಿವೆ ಎಂಬುದು ಗಮನಾರ್ಹ. ಇದು ಒಂದು ರೀತಿ ಭಾರೀ ಅಚ್ಚರಿಗೂ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ತಿಂಡಿ-ತಿನಿಸುಗಳ ವಿಡಿಯೋ ಅಂದರೆ ನೆಟ್ಟಿಗರಿಗೆ ಮತ್ತು ತಿಂಡಿ ಪ್ರಿಯರಿಗೆ ಅದೇನೋ ಒಂದು ಕುತೂಹಲ. ಅಡುಗೆ ತಯಾರಿಕೆಯಲ್ಲಿ ತೊಡಗಿರುವವರು ಏನು ಮಾಡುತ್ತಿರಬಹುದು? ಯಾವ ಖಾದ್ಯ ತಯಾರಿಸುತ್ತಿದ್ದಾರೆ ಎಂದು ಕೌತುಕದಿಂದಲೇ ವಿಡಿಯೋವನ್ನು ಕೊನೆಯವರೆಗೂ ನೋಡಿ ಮುಗಿಸುತ್ತಾರೆ. ಸದ್ಯ ಅದೇ ರೀತಿಯಲ್ಲಿ ಇಲ್ಲೊಂದು ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಹಸಿಮೆಣಸಿನಕಾಯಿ ಹಲ್ವಾ ತಯಾರಿಕೆ ನೋಡಿ ನೆಟ್ಟಿಗರು ದಂಗಾಗಿದ್ದಾರೆ.
ಕೇರಳ ಮೂಲದ ಮೆಣಸಿನಕಾಯಿ ಹಲ್ವಾ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾವನ್ನು ಸುತ್ತುವರೆದಿದ್ದು, ಖಾರ ಖಾರವಾದ ಹಸಿಮೆಣಸಿನಕಾಯಿಯನ್ನು ತುಂಡು ತುಂಡಾಗಿ ಕತ್ತರಿಸಿ, ಅದನ್ನು ಹಲ್ವಾ ರೂಪಕ್ಕೆ ತರುವ ಪ್ರಕ್ರಿಯೆಯನ್ನು ಈ ವಿಡಿಯೋ ತೋರಿಸಿದೆ.
ಕೇರಳದ ಕೋಝಿಕೋಡ್ನ ಹೋಟೆಲ್ವೊಂದರಲ್ಲಿ ತಯಾರಿಸಲಾದ 'ಗ್ರಿನ್ ಚಿಲ್ಲಿ ಹಲ್ವಾ' ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಇದನ್ನು ಹೇಗಪ್ಪಾ ತಿನ್ನೋದು? ಸಿಹಿನಾ, ಖಾರಾನಾ? ಯಾವ ಟೆಸ್ಟ್ ಇದೆ ಎಂಬುದನ್ನು ತಿಂದೋರು ಸ್ವಲ್ಪ ಹೇಳಿ ಎಂದು ನೆಟ್ಟಿಗರು ವ್ಯಾಪಕವಾಗಿ ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).