ರಾಯಚೂರು: ಮಂತ್ರಾಲಯಕ್ಕೆ ಪ್ರವಾಸ ಬಂದಿದ್ದ ಮೂವರು ಹಾಸನ ಮೂಲದ ವಿದ್ಯಾರ್ಥಿಗಳು ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ವೇಳೆ ನಾಪತ್ತೆಯಾಗಿರುವುದಾಗಿ ವರದಿಯಾಗಿತ್ತು. ಶನಿವಾರ (ಜು.12) ಸಂಜೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದ್ದು, ಇಂದು ಕೈಗೊಂಡ ಶೋಧ ಕಾರ್ಯದಲ್ಲಿ ಯುವಕರ ಮೃತದೇಹಗಳು ಪತ್ತೆಯಾಗಿವೆ.
ಇದನ್ನೂ ಓದಿ: ಸಮಯ ವ್ಯರ್ಥ ಮಾಡುವ ಗಿಮಿಕ್ ಬೇಡ! ಮೈದಾನದಲ್ಲೇ ಇಂಗ್ಲೆಂಡ್ ಬ್ಯಾಟರ್ಗಳಿಗೆ ಗಿಲ್ ಸಿಡಿನುಡಿ | IND vs ENG
ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದ ಸ್ಥಳದಲ್ಲೇ ಮೃತದೇಹಗಳು ಸಿಕ್ಕಿವೆ ಎಂದು ವರದಿಯಾಗಿದೆ. ಮೃತರನ್ನು ಹಾಸನ ಮೂಲದ ಅಜಿತ್(20), ಸಚಿನ್ (20) ಮತ್ತು ಪ್ರಮೋದ (19) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಎಸ್ಡಿಆರ್ಎಫ್ ತಂಡದಿಂದ ಶೋಧ ಕಾರ್ಯ ನಡೆದಿದೆ. ಪ್ರಕರಣ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಯುವಕರ ಕುಟುಂಬಸ್ಥರು ಕಂಗಾಲಾಗಿದ್ದು, ಮಕ್ಕಳ ಶವ ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹಾಸನದಿಂದ ಒಟ್ಟು 7 ಜನ ಸ್ನೇಹಿತರು ಮಂತ್ರಾಲಯಕ್ಕೆ ರಾಯರ ದರ್ಶನ ಪಡೆಯಲು ಬಂದಿದ್ದರು. ಆದರೆ, ಮೂವರು ಮಾತ್ರ ನದಿಯಲ್ಲಿ ಕೊಚ್ಚಿ ಹೋಗಿರುವುದಾಗಿ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಪ್ರಾಥಮಿಕ ವರದಿ ಒಪ್ಪುವಂತಿಲ್ಲ; ವಿಮಾನ ದುರಂತದಲ್ಲಿ ಮೃತಪಟ್ಟ ಯುವಕನ ತಂದೆ ಅಳಲು, ಹೊಸ ತನಿಖೆಗೆ ಆಗ್ರಹ | AAIB Report
ತುಂಗಭದ್ರಾ ನದಿಯಲ್ಲಿ ಪ್ರವಾಹ ಭೀತಿಯಿದ್ದು ಯಾರೂ ನದಿಗಿಳಿಯದಂತೆ ಪೊಲೀಸರು ಹಾಗೂ ಮಠದ ಆಡಳಿತ ಮೇಲಿಂದ ಮೇಲೆ ಎಚ್ಚರಿಕೆ ನೀಡಿದ್ದರೂ ನದಿಗೆ ಈಜಲು ಇಳಿದಿದ್ದ ಈ ಮೂವರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ, ದುರಂತ ಅಂತ್ಯ ಕಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಂತ್ರಾಲಯ ಪೊಲೀಸರು ನಾಪತ್ತೆಯಾದ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ಕೈಗೊಂಡರು.