ಪ್ರಾಥಮಿಕ ವರದಿ ಒಪ್ಪುವಂತಿಲ್ಲ; ವಿಮಾನ ದುರಂತದಲ್ಲಿ ಮೃತಪಟ್ಟ ಯುವಕನ ತಂದೆ ಅಳಲು, ಹೊಸ ತನಿಖೆಗೆ ಆಗ್ರಹ | AAIB Report

ವಿಜಯವಾಣಿ (59)
Published on

AAIB Report: ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಹೊರಬಿದ್ದ ಪ್ರಾಥಮಿಕ ವರದಿಗೆ ಮೃತ ಸಂಕೇತ್​​ ಗೋಸ್ವಾಮಿ (19) ತಂದೆ ಖಂಡಿಸಿದ್ದಾರೆ. ವಿಮಾನಯಾನ ಸಂಸ್ಥೆ ನಡೆಸಿ, ಕೇಂದ್ರಕ್ಕೆ ಸಲ್ಲಿಸಿರುವ ತನಿಖಾ ವರದಿ ಕಿಂಚಿತ್ತು ಒಪ್ಪಿಗೆ ತಂದಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಏರ್ ಇಂಡಿಯಾ AI171 ವಿಮಾನ ದುರಂತದಲ್ಲಿ ಸಾವಿಗೀಡಾದ 241 ಪ್ರಯಾಣಿಕರ ಪೈಕಿ ಸಂಕೇತ್​ ಕೂಡ ಒಬ್ಬ. ಲಂಡನ್​ನಲ್ಲಿ ಮೂರು ವರ್ಷಗಳ ಪದವಿ ಮುಗಿಸಲು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಸಂಕೇತ್​, ಅಪಘಾತದಲ್ಲಿ ಮೃತಪಟ್ಟ. ಅಪಘಾತದ ಹಿಂದಿರುವ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಮುಂದಾದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಇತ್ತೀಚೆಗಷ್ಟೇ ಪ್ರಾಥಮಿಕ ವರದಿಯನ್ನು ಸಾರ್ವಜನಿಕರ ಎದುರು ಬಹಿರಂಗಪಡಿಸಿತು. ಇದನ್ನು ನೋಡಿದ ಸಂಕೇತ್​ ತಂದೆ, ವರದಿ ನನಗೆ ತೃಪ್ತಿ ತಂದಿಲ್ಲ. ಸರ್ಕಾರ ಸಂಪೂರ್ಣ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮಗ ಸಂಕೇತ್​ನನ್ನು ನೆನೆದು ಭಾವುಕರಾಗಿ ಮಾತನಾಡಿದ ಅತುಲ್ ಗೋಸ್ವಾಮಿ, "ನನ್ನ ಮಗನಿಗೆ 19 ವರ್ಷ ವಯಸ್ಸಾಗಿತ್ತು. ನನ್ನ ಕುಟುಂಬ ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿದೆ. ನನ್ನ ಮಗನ ಮೇಲೆ ನಾವೆಲ್ಲ ಬಹಳಷ್ಟು ಅವಲಂಬಿಸಿದ್ದೆವು. ಅವನು ಪದವಿ ಪಡೆಯಲು 3 ವರ್ಷಗಳ ಕಾಲ ಲಂಡನ್‌ಗೆ ಹೋಗುತ್ತಿದ್ದ. ಆದರೆ, ಅಷ್ಟರೊಳಗೆ ದುರಂತ ಸಂಭವಿಸಿತು. ಈ ವರದಿಯಿಂದ ನಮಗೆ ತೃಪ್ತಿಯಿಲ್ಲ. ಸರ್ಕಾರವು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಕೋರುತ್ತೇವೆ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net