ನ್ಯೂಸ್

Haryana Assembly Poll | 90 ಕ್ಷೇತ್ರಗಳಿಗೆ ಮತದಾನ ಆರಂಭ, 1,031 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಚಂಡೀಗಢ: 90 ಸದಸ್ಯಬಲವಿರುವ ಹರಿಯಾಣ ವಿಧಾನಸಭೆಗೆ (Haryana Assembly Poll) ಇಂದು (ಅಕ್ಟೋಬರ್​ 05) ಮತದಾನ ನಡೆಯುತ್ತಿದ್ದು, ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್'ನ ಭೂಪಿಂದರ್ ಸಿಂಗ್ ಹೂಡಾ ಮತ್ತು ಕುಸ್ತಿಪಟು ವಿನೇಶ್ ಪೋಗಟ್​ ಸೇರಿದಂತೆ 1,031 ಅಭ್ಯರ್ಥಿಗಳ ನಿರ್ಧಾರವಾಗಲಿದೆ.

ಹ್ಯಾಟ್ರಿಕ್​ ನಿರೀಕ್ಷಯಲ್ಲಿರುವ ಬಿಜೆಪಿಗೆ ಕಾಂಗ್ರೆಸ್​ ನೇರ ಸವಾಲೊಡ್ಡಿದ್ದು, ದಶಕದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಇರಾದೆಯಲ್ಲಿದೆ. ಇದಲ್ಲದೆ ಈ ಚುನಾವಣೆಯು ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ರಾಜ್ಯವನ್ನು ಮತ್ತೊಮ್ಮೆ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಕಸರತ್ತನ್ನು ಮಾಡುತ್ತಿದೆ.

ರಾಜ್ಯದಲ್ಲಿ 8,821 ಶತಾಯುಷಿಗಳು ಸೇರಿದಂತೆ 2,03,54,350 ಮತದಾರರಿದ್ದು, 101 ಮಹಿಳೆಯರು ಸೇರಿದಂತೆ 1,031 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನಕ್ಕಾಗಿ  20,632 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,  ಬಿಜೆಪಿ, ಕಾಂಗ್ರೆಸ್,ಎಎಪಿ, ಐಎನ್ಎಲ್'ಡಿ-ಬಿಎಸ್'ಪಿ ಮತ್ತು ಜೆಜೆಪಿ-ಆಜಾದ್ ಸಮಾಜ ಪಕ್ಷಗಳು ಕಣದಲ್ಲಿವೆ.

2019ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್​ ಹಾಗೂ ಜೆಜೆಪಿ ತಲಾ 10 ಸ್ಥಾನಗಳಲ್ಲಿ ಜಯ ಗಳಿಸಿದ್ದವು.  ಬಹುಮತ ಬಾರದ ಕಾರಣ ಬಿಜೆಪಿ ಜೆಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಆದರೆ, ಇದೀಗ ಬಿಜೆಪಿ ಹಾಗೂ ಜೆಜೆಪಿ ಮೈತ್ರಿ ಮುರಿದುಕೊಂಡು ಪ್ರತ್ಯೇಕವಾಗಿ ಕಣಕ್ಕಿಳಿದಿವೆ.

ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು (ಅಕ್ಟೋಬರ್​ 05) ಸಂಜೆ ಎಕ್ಸಿಟ್​ ಪೋಲ್​ ವರದಿಗಳು ಬಿಡುಗಡೆಯಾಗಲಿದ್ದು, ಯಾವ ಪಕ್ಷಕ್ಕೆ ಜನ ಮಣೆ ಹಾಕಿದ್ದಾರೆ ಎಂದು ಕಾದು ನೋಡಬೇಕಿದೆ.