ನ್ಯೂಸ್

ಸರ್ಕಾರಕ್ಕೆ ಜಾತಿ ಸಂಕಟ: ಮಡಿಲ ಕೆಂಡವಾದ ವರದಿ; ಸ್ವೀಕರಿಸಿದರೆ ಕಷ್ಟ, ಬಿಟ್ಟರೆ ನಷ್ಟ..

| ಮೃತ್ಯುಂಜಯ ಕಪಗಲ್ ಬೆಂಗಳೂರು

ಆಡುಮಾತಿನಲ್ಲಿ ‘ಜಾತಿ ಗಣತಿ ವರದಿ’ ಎಂದೇ ಕರೆಯಲ್ಪಡುವ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ ಸದ್ಯದಲ್ಲಿ ರ್ತಾಕ ಘಟ್ಟ ತಲುಪುವ ಲಕ್ಷಣಗಳೇ ಕಾಣುತ್ತಿಲ್ಲ. ಹಿರಿಯ ನ್ಯಾಯವಾದಿ ಎಚ್.ಕಾಂತರಾಜ್ ಅವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಿದ್ಧಪಡಿಸಿದ ಈ ವರದಿ ಸರ್ಕಾರಕ್ಕೆ ಮಡಿಲ ಕೆಂಡವಾಗಿದೆ. ಆಯೋಗ ಇನ್ನೂ ವರದಿ ಸಲ್ಲಿಸಿಲ್ಲವೆಂದು ಬೊಟ್ಟು ಮಾಡಿ ತೋರಿಸುತ್ತಾ ಸರ್ಕಾರ ಕಾಲ ಕಳೆದಿದ್ದು, ಪ್ರಕರಣ ಹೈಕೋರ್ಟ್​ನಲ್ಲಿದೆ ಎಂಬ ಮತ್ತೊಂದು ‘ಗುರಾಣಿ’ಯನ್ನು ದಕ್ಕಿಸಿಕೊಂಡಿದೆ. ಈ ವ್ಯಾಜ್ಯದ ವಿಚಾರಣೆ ಇದೇ ಜು.17ಕ್ಕೆ ನಡೆಯಲಿರುವುದರಿಂದ ಸರ್ಕಾರಕ್ಕೆ ಕಟಕಟೆಯ ರಕ್ಷಣಾ ಕವಚ ಬಹು ದಿನಗಳ ಕಾಲ ಉಳಿಯುವ ಸಾಧ್ಯತೆಗಳಿಲ್ಲ. ಬಜೆಟ್ ಅಧಿವೇಶನದಲ್ಲಿ ಪಕ್ಷಬೇಧ ಮರೆತು ಒತ್ತಾಯಿಸಿದಾಗ ಅಂಕಿ-ಅಂಶಗಳ ಗಣಕೀಕರಣ ಸೇರಿದಂತೆ ವರದಿ ಸಿದ್ಧವಾಗಿದ್ದು, ಆದಷ್ಟು ಬೇಗ ಆಯೋಗದಿಂದ ವರದಿ ತರಿಸಿಕೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ವಿಧಾನ ಮಂಡಲದ ಮುಂಗಾರು ಅಧಿವೇಶನ ಕರೆಯಬೇಕೆಂಬ ಒತ್ತಡ ಹೆಚ್ಚಾಗಿದ್ದು, ಮುಂಬರುವ ಅಧಿವೇಶನದಲ್ಲೂ ಈ ವರದಿ ಮಂಡಿಸಬೇಕೆಂಬ ಧ್ವನಿ ಮತ್ತಷ್ಟು ಜೋರಾಗುವ ನಿರೀಕ್ಷೆಯಿದೆ.

ತಂತ್ರ-ಪ್ರತಿತಂತ್ರ: ಮುಂದಿನ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಈ ವರದಿಯನ್ನು ಮತ್ತೆ ಚರ್ಚೆಯ ಮುನ್ನೆಲೆಗೆ ತಂದಿದೆ. ವರದಿ ಸ್ವೀಕರಿಸಿ, ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆದು ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದೆ. ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವೇ ಮುಖ್ಯವಾಗಿರುವ ಕಾರಣ ಆಡಳಿತಾರೂಢ ಬಿಜೆಪಿ ಕೂಡ ಪ್ರತಿತಂತ್ರ ಹೂಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಸರ್ಕಾರಕ್ಕೇಕೆ ಆತಂಕ?

  • ವರದಿ ಅಂಗೀಕರಿಸಿದರೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಎನಿಸಿರುವ ಕೆಲವೊಂದು ಪ್ರಬಲ ಸಮುದಾಯಗಳ ನಿಷ್ಠುರ ಕಟ್ಟಿಕೊಳ್ಳಬೇಕಾಗುತ್ತದೆ.
  • ವರದಿ ಸೋರಿಕೆ ಮಾಹಿತಿ ಪ್ರಕಾರ ರಾಜಕೀಯ ಅಧಿಕಾರದ ಮುಂಚೂಣಿಯಲ್ಲಿ ಇರುವ ಕೆಲ ಬಲಿಷ್ಠ ಸಮುದಾಯಗಳ ಜನಸಂಖ್ಯೆಗಿಂತ ನಿರ್ಲಕ್ಷಿತ, ಹಿಂದುಳಿದ ಆಯ್ದ ಸಮುದಾಯಗಳ ಜನಸಂಖ್ಯೆ ಹೆಚ್ಚಿದ್ದು, ಇದು ಬಹಿರಂಗವಾದರೆ ಬೇರೊಂದು ತಿರುವುದು ಪಡೆದುಕೊಂಡೀತು ಎಂಬ ದಿಗಿಲು.

ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಗೆ ಸಂಬಂಧಿಸಿದ ವ್ಯಾಜ್ಯವೊಂದು ಹೈಕೋರ್ಟ್​ನಲ್ಲಿದ್ದು, ಜು.17ರಂದು ವಿಚಾರಣೆಗೆ ಬರಲಿದೆ. ಹೈಕೋರ್ಟ್ ನೀಡಲಿರುವ ಆದೇಶ ನೋಡಿಕೊಂಡು ವರದಿ ಬಗ್ಗೆ ಮುಂದಿನ ಕ್ರಮವಹಿಸಲಾಗುವುದು. | ಕೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ. ಜಾತಿ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಿ, ಚರ್ಚೆಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಬೇಕು. ವರದಿ ಸರಿಯಾಗಿಲ್ಲ, ಲೋಪ-ದೋಷಗಳಿವೆ ಎಂದಾದರೆ ಮರು ಪರಿಶೀಲನೆಯ ಅಧಿಕಾರ ಹಾಗೂ ಅವಕಾಶವನ್ನು ಸರ್ಕಾರ ಬಳಸಿಕೊಳ್ಳಬಹುದಾಗಿದೆ. | ಕೆ.ಪಿ.ನಂಜುಂಡಿ ಬಿಜೆಪಿ ವಿಧಾನ ಪರಿಷತ್ ಸದಸ್ಯ.

ಬಿಸಿ ತುಪ್ಪವಾದ ವರದಿ...

ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸೌಲಭ್ಯ ಹಂಚಿಕೆ, ಕಾರ್ಯಕ್ರಮಗಳ ರೂಪು-ರೇಷೆ ಸಿದ್ಧಪಡಿಸುವುದಕ್ಕೆ ನೆರವಾಗಲಿ ಎನ್ನುವುದು ಸಮೀಕ್ಷೆ ಉದ್ದೇಶವೆಂದು ಅಂದಿನ ಸರ್ಕಾರ ಹೇಳಿತ್ತು. ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ರಚಿತ ಎಚ್. ಕಾಂತರಾಜ್ ನೇತೃತ್ವದ ಆಯೋಗ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿದ್ದು, ಅಧಿಕೃತ ವರದಿ ಸಲ್ಲಿಕೆಗೆ ಮುನ್ನ ಕೆಲವು ಮಹತ್ವದ ಮಾಹಿತಿಗಳ ಸೋರಿಕೆಯಿಂದಾಗಿ ‘ರಾಜಕೀಯ ಸೋಂಕು’ ಬಾಧಿತವಾಯಿತು. ರಾಜ್ಯದಲ್ಲಿ ಬಿಂಬಿತ ಜಾತಿವಾರು ಬಲ ಮಿಥ್ಯ, ವರದಿಯಲ್ಲಿರುವುದು ಸತ್ಯ ಎಂಬ ವಾದ, ಅದರ ಬೆನ್ನಿಗೆ ವಿವಾದಗಳು ಭುಗಿಲೆದ್ದಿದ್ದವು. ಇದರಿಂದಾಗಿ ಕಾಂಗ್ರೆಸ್ ಸರ್ಕಾರ, ತದನಂತರ ಮೈತ್ರಿ ಸರ್ಕಾರ ಹಾಗೂ ಹಾಲಿ ಬಿಜೆಪಿ ಸರ್ಕಾರದ ಪಾಲಿಗೆ ವರದಿ ಸ್ವೀಕರಿಸಿದರೂ ಕಷ್ಟ, ಬಿಟ್ಟರೂ ನಷ್ಟವೆಂಬಂತಾಗಿದೆ. ಪರಿಸ್ಥಿತಿ ಸೂಕ್ಷ್ಮತೆ ಅರಿತ ಪ್ರಮುಖ ಮೂರು ರಾಜಕೀಯ ಪಕ್ಷಗಳು ‘ನುಣುಚಿಕೊಳ್ಳುವ’ ತಂತ್ರಗಾರಿಕೆ ಅನುಸರಿಸುತ್ತಾ ಬಂದಿರುವುದು ತೆರೆದ ಲಕೋಟೆ ರಹಸ್ಯ. ಸಿದ್ದರಾಮಯ್ಯ ಅವಧಿಯಲ್ಲೇ ಈ ವರದಿ ಸಿದ್ಧವಾಗಿತ್ತು.

ಆದರೆ ಸ್ವೀಕರಿಸಲು ಹಿಂಜರಿದರು ಎಂಬ ಆರೋಪ ಕೇಳಿಬಂದಿದ್ದವು. ಸಮೀಕ್ಷೆ ಪೂರ್ಣಗೊಂಡಿಲ್ಲವೆಂದು ಸ್ವತಃ ಕಾಂತರಾಜ್ ಸ್ಪಷ್ಟಪಡಿಸಿ, ಈ ಚರ್ಚೆಗೆ ತೆರೆ ಎಳೆದಿದ್ದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವರದಿ ಸಿದ್ಧವಾಗಿತ್ತು. ಆದರೆ ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ವರದಿ ಸ್ವೀಕರಿಸುವ ಆಸಕ್ತಿ ತೋರಿಸಲಿಲ್ಲ. ಅಲ್ಲದೆ, ಮಿತ್ರಪಕ್ಷ ಕಾಂಗ್ರೆಸ್ ಕೂಡ ತಟಸ್ಥ ನಿಲುವಿಗೆ ಶರಣಾಯಿತು. ಸಮ್ಮಿಶ್ರ ಸರ್ಕಾರ ಪತನವಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಯೋಗದ ಅಧ್ಯಕ್ಷ, ಸದಸ್ಯರ ವಿಸ್ತರಣಾ ಅವಧಿಯನ್ನು ರದ್ದು ಮಾಡಿದರು. ಪರಿಣಾಮವಾಗಿ ವರದಿಯನ್ನು ಆಯೋಗದ ಕಾರ್ಯದರ್ಶಿ ಕೈಗಿತ್ತು, ಅಧ್ಯಕ್ಷ ಕಾಂತರಾಜ್ ಮತ್ತವರ ತಂಡ ನಿರ್ಗಮಿಸಿದ್ದು, ಆಯೋಗದ ನೂತನ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಈ ವರದಿ ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಗಣತಿಯ ಮುಖ್ಯಾಂಶಗಳು

  • ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್ ಮತ್ತು ಮೂವರು ಸದಸ್ಯರನ್ನು ಒಳಗೊಂಡ ತಂಡಕ್ಕೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು 2014ರಲ್ಲಿ ಆದೇಶವಾಗಿತ್ತು. ಸಮೀಕ್ಷೆ ಪೂರ್ಣಗೊಳಿಸಲೆಂದು 2017ರ ಜುಲೈನಲ್ಲಿ ಅವಧಿ ವಿಸ್ತರಣೆ
  • ಪೂರ್ಣಗೊಂಡ ವರದಿ ಸಲ್ಲಿಸುವುದಕ್ಕೆ ಆಯೋಗ ಉತ್ಸುಕ, ಅಂದಿನ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ನಿರ್ಲಿಪ್ತ
  • ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ವಿಸ್ತರಣಾ ಅವಧಿ ರದ್ದು
  • 1,383 ಜಾತಿಗಳ ಸಮೀಕ್ಷೆ, ನಗರ-ಗ್ರಾಮೀಣ ಪ್ರದೇಶದಲ್ಲಿ 55 ಅಂಶಗಳು ಆಧಾರಿತ ಮಾಹಿತಿ ಸಂಗ್ರಹ
  • ಗಣತಿಗೆ 1.88 ಲಕ್ಷ ಸಿಬ್ಬಂದಿ ಬಳಕೆ, ಒಟ್ಟು 162.77 ಕೋಟಿ ರೂ. ವೆಚ್ಚ