ನ್ಯೂಸ್

ಕರ್ನಾಟಕ ಚುನಾವಣೆ 2023: ಹೆಚ್ಚಿನ ಮತದಾನಕ್ಕೆ ಗೋವಾ ಸರ್ಕಾರ ಸಾಥ್​, ಸರ್ಕಾರಿ ರಜೆ ಘೋಷಣೆ

ಬೆಂಗಳೂರು/ಪಣಜಿ: ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಜಾಪ್ರಭುತ್ವದ ಹಬ್ಬಕ್ಕೆ ನಾಳೆ ಮಹತ್ವದ ದಿನವಾಗಿದ್ದು, ನಾಳೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಮತದಾರರು ಕರ್ನಾಟಕದ ಭವಿಷ್ಯಕ್ಕೆ ಮುನ್ನುಡಿ ಬರೆಯಲಿದ್ದಾರೆ. ಈ ಬಾರಿ ರಾಜ್ಯದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕೆಂದು ಚುನಾವಣಾ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನಕ್ಕೆ ಗೋವಾ ಸರ್ಕಾರವು ಸಹ ಸಾಥ್​ ನೀಡಿದೆ.

ಹೌದು, ನಾಳೆ ರಾಜ್ಯದಲ್ಲಿ ನಡೆಯುವ ಮತದಾನಕ್ಕೆ ಗೋವಾ ಸರ್ಕಾರ ಸಹ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿದೆ. ಬುಧವಾರ (ಮೆ.10) ಖಾಸಗಿ ಮತ್ತು ಸರ್ಕಾರಿ ನೌಕರರಿಗೆ ರಜೆ ಘೋಷಿಸಿ ಗೋವಾ ಸರ್ಕಾರ ಆದೇಶ ಹೊರಡಿಸಿದೆ.

ಅಸಮಾಧಾನ

ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದೆ. ಗೋವಾದಲ್ಲಿ ಸಾಕಷ್ಟು ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ. ಈ ದೃಷ್ಟಿಯಿಂದ ಮತದಾನಕ್ಕೆ ಅನುಕೂಲವಾಗುವಂತೆ ರಜೆ ಘೋಷಿಸಲಾಗಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಗೋವಾ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ದಾಮೋದರ್ ಕೋಚ‌ ಅಸಮಾಧಾನ ಹೊರಹಾಕಿದ್ದು, ಇದು ಅಸಂಬದ್ಧ ಹಾಗೂ ಮೂರ್ಖತನದ ನಿರ್ಧಾರ ಎಂದು ಟೀಕೆ ಮಾಡಿದ್ದಾರೆ.

ಮೇ 13ಕ್ಕೆ ಫಲಿತಾಂಶ

ನಾಳೆ (ಮೇ.10) ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ರಾಜ್ಯ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಅಧಿಕಾರ ರಚನೆಗೆ 113 ಸದಸ್ಯರನ್ನು ಒಳಗೊಂಡ ಸ್ಪಷ್ಟ ಬಹುಮತವನ್ನು ಯಾವುದಾದರೊಂದು ಪಕ್ಷ ಪಡೆಯಬೇಕಿದೆ. ಒಂದು ವೇಳೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಹೋದಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು, ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. (ದಿಗ್ವಿಜಯ ನ್ಯೂಸ್​)