More

    ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆ

    | ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ

    ಈ ಬಾರಿ ವಿದ್ಯಾದೇವಿ ಶಾರದಾ ಮಾತೆ ಕೋಟೆನಾಡಿಗೆ ಒಲಿದಿದ್ದಾಳೆ. ಆರ್ಥಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಚಿತ್ರದುರ್ಗ ಎಲ್ಲ ಜಿಲ್ಲೆಗಳನ್ನು ಹಿಂದಿಕ್ಕಿ 2023ನೇ ಸಾಲಿನಲ್ಲಿ ಶೇ.96.80 ಫಲಿತಾಂಶದೊಂದಿಗೆ ಮೊದಲ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. 2015ರಲ್ಲಿ 19ನೇ ಸ್ಥಾನದಲ್ಲಿದ್ದ ಜಿಲ್ಲೆಯನ್ನು ಹಂತ-ಹಂತವಾಗಿ ಮೇಲೆತ್ತುವ ಪ್ರಯತ್ನದಲ್ಲಿ ಶಿಕ್ಷಣ ಇಲಾಖೆ ಯಶಸ್ವಿಯಾಗಿದೆ. 2020, 21 ಎರಡೂ ಬಾರಿ 5ನೇ, 22ರಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡರೂ ಛಲ ಬಿಡದಿದ್ದರಿಂದಾಗಿ ಮೊದಲ ಸ್ಥಾನಕ್ಕೇರಲು ಸಾಧ್ಯವಾಗಿದೆ.

    ಫಲಿತಾಂಶದ ಹಿಂದಿನ ರಹಸ್ಯ: ನಂ.1 ಸ್ಥಾನದ ಗುರಿಯೊಂದಿಗೆ ಉತ್ತಮ ಫಲಿತಾಂಶಕ್ಕಾಗಿ ಇಡೀ ಶಿಕ್ಷಣ ಇಲಾಖೆ ಮತ್ತು ಡಯಟ್ ಅಧಿಕಾರಿಗಳು, ವಿಷಯವಾರು ನೋಡಲ್ ಅಧಿಕಾರಿಗಳು, ಮುಖ್ಯಶಿಕ್ಷಕರು, ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ವಿದ್ಯಾರ್ಥಿಗಳ ನಡುವಿನ ಸಮನ್ವಯತೆ ಮೊದಲ ಪಟ್ಟಕ್ಕೇರಲು ಕಾರಣವಾಗಿದೆ.

    ವಿವಿಧ ವಿಷಯವಾರು ಅಭ್ಯಾಸ ಪುಸ್ತಕಗಳೊಂದಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತು. ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪ್ರಯತ್ನದೊಂದಿಗೆ ಶಿಕ್ಷಕ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿತು. ಆರಂಭದಿಂದಲೇ ಶಿಕ್ಷಕರು, ಅಧಿಕಾರಿಗಳು ಬಿತ್ತಿದ್ದ ಉತ್ತಮ ಪ್ರಯತ್ನದಿಂದಾಗಿ ಜಿಲ್ಲೆಗೆ ಹೆಚ್ಚಿನ ಫಸಲು ದೊರೆದಂತಾಗಿದೆ.

    ಶಾಲೆಯೊಂದರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮತ್ತೊಂದು ಶಾಲೆಗೆ ಒಂದು ದಿನ ತೆರಳಿ ವಿಷಯ ವಿನಿಮಯ, ಗುಂಪು ಚರ್ಚೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ‘ನೆಂಟರ ಶಾಲೆ’ ಹೆಸರಿನಲ್ಲಿ ಜಿಲ್ಲೆಯ ಹಲವೆಡೆ ಕಾರ್ಯಕ್ರಮ ನಡೆದವು. ಪರೀಕ್ಷಾ ಭಯ ಹೋಗಲಾಡಿಸಲು ಒಂದು ಪರೀಕ್ಷಾ ಕೇಂದ್ರದಲ್ಲಿ ಐದಾರು ಶಾಲೆಗಳ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ, ಅಂತಿಮ ಪರೀಕ್ಷೆಗೂ ಮುನ್ನ ಸುಲಭವಾಗಿ 25 ಅಂಕಗಳಿಸುವ ಕಲಿಕಾ ತರಬೇತಿ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸುವಲ್ಲಿ ಯಶಸ್ವಿಯಾಗಿವೆ. ರಾಜ್ಯದ ಶೈಕ್ಷಣಿಕ ವಲಯದ ಚಿತ್ತವನ್ನಾಕರ್ಷಿಸುವಲ್ಲಿಯೂ ಇದೀಗ ಚಿತ್ರದುರ್ಗ ಸಫಲವಾಗಿದೆ. ಈ ಬಾರಿ ಜಿಲ್ಲಾಧಿಕಾರಿ ಜಿ.ಆರ್. ಜೆ.ದಿವ್ಯಾಪ್ರಭು, ಜಿಪಂ ಸಿಇಒ ಎಂ.ಎಸ್.ದಿವಾಕರ್ ಇಬ್ಬರೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ಎಂಎಸ್ಸಿ, ಬಿಎಸ್ಸಿಯಲ್ಲಿ ಬಂಗಾರದ ಪದಕ ಪಡೆದು ಐಎಎಸ್ ಅಧಿಕಾರಿಗಳಾಗಲು ಕೈಗೊಂಡ ವಿದ್ಯಾಭ್ಯಾಸದ ದಿಕ್ಸೂಚಿಯ ಅರಿವು ಮೂಡಿಸಿದರು.

    ಡಿಡಿಪಿಐ ರವಿಶಂಕರ್ ರೆಡ್ಡಿ ಫಲಿತಾಂಶ ಹೆಚ್ಚಳ ಸಂಬಂಧ ರೂಪಿಸಿದ ರಚನಾತ್ಮಕ ಮಾರ್ಗದರ್ಶನದ ಫಲ ಜಿಲ್ಲೆಯ ದಿಕ್ಕನ್ನೇ ಬದಲಿಸಿದೆ. ಹಿರಿಯ ಸಿವಿಲ್ ನ್ಯಾಯಾಧೀಶ ಗಿರೀಶ್, ಎಂಎಲ್ಸಿ ಕೆ.ಎಸ್.ನವೀನ್ ಅವರೂ ತರಬೇತಿ ವೇಳೆ ನೀಡಿದ ಸಲಹೆಗಳು ಫಲಕೊಟ್ಟಿವೆ.

    ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸಾಧನೆ ತುಂಬಾ ಸಂತೋಷ ತಂದಿದೆ. ಅಧಿಕಾರಿ ಗಳ ಶ್ರಮ, ಶಿಕ್ಷಕರ ಮಾರ್ಗ ದರ್ಶನ ಮೊದಲ ಸ್ಥಾನದ ಗುರಿ ತಲುಪಲು ಕಾರಣವಾಗಿದೆ. ಕೋಟೆನಾಡಿನ ಐತಿಹಾಸಿಕ ಫಲಿತಾಂಶಕ್ಕೂ ಇದು ಸಾಕ್ಷಿಯಾಗಿದೆ. 80, 60, 40 ಅಂಕ ಗಳಿಸುವ ವಿದ್ಯಾರ್ಥಿಗಳ ಪಟ್ಟಿ ಮಾಡಿ ಹೆಚ್ಚು ಅಂಕಗಳಿಕೆಗೆ ರೂಪಿಸಿದ್ದ ಕಾರ್ಯಕ್ರಮಗಳು ಯಶಸ್ವಿಯಾಗಿವೆ.

    | ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾಧಿಕಾರಿ

    ನಿರೀಕ್ಷೆಯಂತೆ ಫಲಿತಾಂಶ ಬಂದಿದೆ. ರೂಪಣಾತ್ಮಕ, ಸಂಕಲನಾತ್ಮಕ, ನಿರಂತರ ಮೌಲ್ಯಮಾಪನ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾ, ವಿಷಯವಾರು ಟೀಚರ್ಸ್ ಕ್ಲಬ್​ಗಳ ರಚನೆ, ಗುಂಪು ಚಟುವಟಿಕೆ, ಎಸ್​ಎಒನ್ ಆಧಾರದಲ್ಲಿ ನೀಡಿದ ತರಬೇತಿಗಳು ಫಲ ನೀಡಿವೆ. ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ ಶ್ರಮದಿಂದ ನಂ. 1 ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ.

    | ಎಂ.ಎಸ್.ದಿವಾಕರ್, ಜಿಪಂ ಸಿಇಒ

    ವಿದ್ಯಾರ್ಥಿಗಳು ಶೇ.75ಕ್ಕಿಂತ ಹೆಚ್ಚು ಅಂಕಗಳಿಸಲು ವಿಷಯವಾರು ಸ್ಕೋರಿಂಗ್ ಪ್ಯಾಕೇಜ್, ಕನಿಷ್ಠ ಅಂಕದೊಂದಿಗೆ ಉತ್ತೀರ್ಣರಾಗಲು ಪಾಸಿಂಗ್ ಪ್ಯಾಕೇಜ್, ಶೈಕ್ಷಣಿಕ ತಪಾಸಣೆ, ಸಂಪನ್ಮೂಲ ವ್ಯಕ್ತಿಗಳಿಂದ ವಿಷಯವಾರು ಸಮಸ್ಯೆಗಳಿಗೆ ಪರಿಹಾರ, ವಿಶೇಷ ತರಬೇತಿಯಿಂದಾಗಿ ಚಿತ್ರದುರ್ಗದಲ್ಲಿ ಇತಿಹಾಸ ಸೃಷ್ಟಿಸಿದ್ದೇವೆ.

    | ಕೆ.ರವಿಶಂಕರ್​ರೆಡ್ಡಿ, ಡಿಡಿಪಿಐ

    ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆಬಾಲಕಿಯರು-ಗ್ರಾಮೀಣ ಮಕ್ಕಳೇ ಮೇಲುಗೈ

    ಪ್ರತೀ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 4,09,1324 ವಿದ್ಯಾರ್ಥಿನಿಯರ ಪೈಕಿ 3,59,511 (ಶೇ.87.87) ಮಂದಿ ಉತ್ತೀರ್ಣರಾದರೆ, ಪರೀಕ್ಷೆ ಬರೆದಿದ್ದ 4,25,968 ಬಾಲಕರಲ್ಲಿ 3,41,108 (ಶೇ.80.08) ಮಂದಿ ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದ 3,51,391 ಮಕ್ಕಳಲ್ಲಿ 2,79,773 (ಶೇ.79.62) ಉತ್ತೀರ್ಣರಾಗಿದ್ದರೆ, ಗ್ರಾಮೀಣ ಭಾಗದ 4,83,710 ವಿದ್ಯಾರ್ಥಿಗಳಲ್ಲಿ 4,20,846 ಮಂದಿ (ಶೇ.87) ತೇರ್ಗಡೆಯಾಗಿದ್ದಾರೆ.

    ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆ

    ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆ

    ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆ59 ಸಾವಿರ ಮಂದಿಗೆ ಕೃಪೆ

    ಬೆಂಗಳೂರು: ಬರೋಬ್ಬರಿ 59,246 ಮಕ್ಕಳಿಗೆ ಗರಿಷ್ಠ ಮೂರು ವಿಷಯಗಳಲ್ಲಿ ತಲಾ ಶೇ.10 ಕೃಪಾಂಕ ನೀಡಿ ಪಾಸ್ ಮಾಡಲಾಗಿದೆ. ಕನಿಷ್ಠ 1ರಿಂದ ಗರಿಷ್ಠ 26 ಅಂಕ ನೀಡಲಾಗಿದೆ. ಕಳೆದ ಬಾರಿ 55 ಸಾವಿರ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿತ್ತು.

    34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ: 3,832 ಶಾಲೆಗಳಲ್ಲಿ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳ (ಶೇ.100) ಫಲಿತಾಂಶ ಪ್ರಕಟವಾಗಿದ್ದರೆ, 34 ಶಾಲೆಗಳಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಪಾಸಾಗದೆ ಶೂನ್ಯ ಫಲಿತಾಂಶ ಪ್ರಕಟವಾಗಿದೆ. ಕಳೆದ ವರ್ಷಕ್ಕಿಂತ ಶೇ.100 (3,920) ಫಲಿತಾಂಶದಲ್ಲಿ ಶಾಲೆಗಳ ಸಂಖ್ಯೆ ಕುಸಿದಿದ್ದರೆ, ಶೂನ್ಯ ಫಲಿತಾಂಶದಲ್ಲಿ (20)ಹೆಚ್ಚಳವಾಗಿದೆ. ಮಲ್ಲೇಶ್ವರದಲ್ಲಿರುವ ಮಂಡಳಿಯ ಕಚೇರಿಯಲ್ಲಿ ಸೋಮವಾರ ಫಲಿತಾಂಶ ಪ್ರಕಟಿಸಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಆರ್. ರಾಮಚಂದ್ರನ್, ಕರೊನಾ ಸಮಯದಲ್ಲಿ ಸರಿಯಾದ ಬೋಧನೆಯಾಗಿಲ್ಲ ಎಂಬ ಕಾರಣದಿಂದ ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ನಿಯಮಾನುಸಾರ ಇರಬೇಕಾದ ಶೇ.20 ಕಠಿಣ ಪ್ರಶ್ನೆಗಳ ಪ್ರಮಾಣವನ್ನು ಶೇ.10ಕ್ಕೆ ಇಳಿಸಲಾಗಿತ್ತು. ಹೀಗಾಗಿ ಶೇ.85.13 ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಆದರೆ, ಈ ಬಾರಿ ಯಥಾಪ್ರಕಾರ ಕಠಿಣ ಪ್ರಶ್ನೆಗಳ ಪ್ರಮಾಣವನ್ನು ಶೇ.20ಕ್ಕೆ ಹೆಚ್ಚಿಸಿರುವುದರಿಂದ ಫಲಿತಾಂಶ ಕೊಂಚ ಕಡಿಮೆಯಾಗಿದೆ ಎಂದು ತಿಳಿಸಿದರು.

    ಒಟ್ಟಾರೆ ಫಲಿತಾಂಶದಲ್ಲಿ ಶೇ.87.76 ಶಾಲಾ ಅಭ್ಯರ್ಥಿಗಳ (ಫ್ರೆಶರ್ಸ್), ಶೇ.7.48 ಖಾಸಗಿ ಅಭ್ಯರ್ಥಿಗಳು, ಶೇ.36.33 ಪುನರಾವರ್ತಿತ ಶಾಲಾ ಅಭ್ಯರ್ಥಿಗಳು, ಶೇ.12.45 ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದರು.

    ಖಾಸಗಿ ಶಾಲೆಗಳೇ ಮುಂದು: ಶಾಲಾವಾರು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶೇ.90.89 ವಿದ್ಯಾರ್ಥಿಗಳು, ಸರ್ಕಾರಿ ಶಾಲೆಗಳ ಶೇ.86.74 ಮತ್ತು ಅನುದಾನಿತ ಶಾಲೆಯ ಶೇ.85.64 ಮಕ್ಕಳು ಪಾಸ್ ಆಗಿದ್ದಾರೆ.

    ವಿಷಯವಾರು ಶೇ.100 ಫಲಿತಾಂಶ: ವಿಷಯವಾರು ಪ್ರಥಮ ಭಾಷೆಯಲ್ಲಿ 14,983 ವಿದ್ಯಾರ್ಥಿಗಳು, ದ್ವಿತೀಯ ಭಾಷೆಯಲ್ಲಿ 9,754, ತೃತೀಯ ಭಾಷೆಯಲ್ಲಿ 16,170, ಗಣಿತದಲ್ಲಿ 2,132, ವಿಜ್ಞಾನದಲ್ಲಿ 983 ಮಂದಿ ಮತ್ತು ಸಮಾಜ ವಿಜ್ಞಾನದಲ್ಲಿ 8311 ವಿದ್ಯಾರ್ಥಿಗಳು ಶೇ.100 ಅಂಕ ಪಡೆದುಕೊಂಡಿದ್ದಾರೆ.

    ಮಾಧ್ಯಮವಾರು: ಕನ್ನಡ ಮಾಧ್ಯಮದಲ್ಲಿ 4.43 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಶೇ.85.59 ಮಂದಿ ಪಾಸಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ 3.14 ಲಕ್ಷ ಮಕ್ಕಳು ಪರೀಕ್ಷೆ ಬರೆದು ಶೇ.91.66 ಉತ್ತೀರ್ಣರಾಗಿದ್ದಾರೆ. ಇನ್ನು ಉರ್ದುವಿನಲ್ಲಿ 19,103 ಮಂದಿ ಪರೀಕ್ಷೆ ಬರೆದಿದ್ದು ಶೇ.76 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಮಂಡಳಿಯ ನಿರ್ದೇಶಕ (ಪರೀಕ್ಷೆ) ಎಚ್.ಎನ್. ಗೋಪಾಲಕೃಷ್ಣ ಉಪಸ್ಥಿತರಿದ್ದರು.

    ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆಜಿಲ್ಲಾವಾರು ಫಲಿತಾಂಶ ವಿಶ್ಲೇಷಣೆ

    2020ರಿಂದ ಜಿಲ್ಲಾವಾರು ರ್ಯಾಂಕ್ ಪಟ್ಟಿಯನ್ನು ಶ್ರೇಣಿಕೃತ ವ್ಯವಸ್ಥೆಗೆ ಅಳವಡಿಸಿದೆ. ಆ ಪ್ರಕಾರ ‘ಎ’ ಶ್ರೇಣಿ (ಶೇ.75ರಿಂದ 100)ಯಲ್ಲಿ 23 ಜಿಲ್ಲೆಗಳಿವೆ. ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಧುಗಿರಿ, ತುಮಕೂರು, ಚಾಮರಾಜನಗರ, ಮೈಸೂರು, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ, ಕೊಡುಗು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಹಾವೇರಿ, ಚಿಕ್ಕೋಡಿ, ವಿಜಯಪುರ, ಶಿರಸಿ, ಉತ್ತರ ಕನ್ನಡ, ಕೊಪ್ಪಳ, ವಿಜಯನಗರ ‘ಬಿ’ (ಶೇ.60ರಿಂದ 75) 12 ಜಿಲ್ಲೆಗಳಿವೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಶಿವಮೊಗ್ಗ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್, ಬಳ್ಳಾರಿ.

    ರೈತನ ಮಗನ ಅಪೂರ್ವ ಸಾಧನೆ

    ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆಮುದ್ದೇಬಿಹಾಳ: ನಮ್ಮ ತಂದೆ ಕೃಷಿಕರು. ನಾನೆಲ್ಲೂ ಟ್ಯೂಷನ್​ಗೆ ಹೋಗಿಲ್ಲ. ಶಾಲೆಯಲ್ಲಿ ಶಿಕ್ಷಕರು ಕೊಡುತ್ತಿದ್ದ ಪಾಠ ಬೋಧನೆ ಹಾಗೂ ಹೆಚ್ಚುವರಿ ವಿದ್ಯಾಭ್ಯಾಸದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡ ತಾಲೂಕಿನ ನಾಗರಬೆಟ್ಟ ಆಕ್ಸ್ ಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಭೀಮನಗೌಡ ಹಣಮಂತಗೌಡ ಬಿರಾದಾರ ಪಾಟೀಲ್ ಅಭಿಪ್ರಾಯಪಟ್ಟಿದ್ದಾನೆ.

    ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿದ ಬಳಿಕ ಅಭಿಪ್ರಾಯ ಹಂಚಿಕೊಂಡ ಬಿರಾದಾರ, ನಮ್ಮದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬುದ್ನಿ ಬಿ.ಕೆ. ತಂದೆ ಕೃಷಿಕರು. ತಾಯಿ ರೇಖಾ ಮನೆಯಲ್ಲಿಯೇ ಮನೆ ಕೆಲಸ ಮಾಡಿಕೊಂಡು ಇರುತ್ತಾರೆ. ಮುಂದೆ ನಾನು ಎಂಬಿಬಿಎಸ್ ಓದುವ ಆಸೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾನೆ.

    ಆಕ್ಸ್​ಫರ್ಡ್ ಶಾಲೆಯಲ್ಲಿ ತರಗತಿಯ ಸ್ಟಡಿ ಅವರ್ ನಮ್ಮ ಕೈ ಹಿಡಿದಿದೆ. ನಿತ್ಯ 14 ರಿಂದ 17 ತಾಸು ಓದುತ್ತಿದ್ದೆ. ಅದರಿಂದಲೆ ಈ ಸಾಧನೆ ಕಾರಣವಾಗಿದೆ. ಈ ಸಾಧನೆಗೆ ನಮ್ಮ ತಂದೆ-ತಾಯಿ, ಚಿಕ್ಕಪ್ಪ ಶ್ರೀನಿವಾಸ, ಶಾಲೆ ಅಧ್ಯಕ್ಷರಾದ ಎಂ.ಎಸ್. ಪಾಟೀಲ್, ಮುಖ್ಯಗುರು ಇಸ್ಮಾಯಿಲ್ ಮನಿಯಾರ್ ಸೇರಿ ಹಲವರು ಸಹಾಯ ಮಾಡಿದ್ದಾರೆ.

    | ಭೀಮನಗೌಡ ಹಣಮಂತಗೌಡ ಬಿರಾದಾರ ಪಾಟೀಲ್

    ಕಠಿಣ ಅಭ್ಯಾಸದಿಂದ ಯಶಸ್

    ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆಚಿಕ್ಕಬಳ್ಳಾಪುರ: ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಪ್ರೌಢಶಾಲೆಯ ವಿದ್ಯಾರ್ಥಿ ಯಶಸ್​ಗೌಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆಯುವುದರೊಂದಿಗೆ ರಾಜ್ಯದ ಟಾಪರ್ ಆಗಿ ಗಮನ ಸೆಳೆದಿದ್ದಾನೆ. ಯಶಸ್ ತಾಲೂಕಿನ ಮಜ್ಜಿಗೆಹೊಸಹಳ್ಳಿಯ ನಾರಾಯಣಸ್ವಾಮಿ ಮತ್ತು ಭಾಗ್ಯಮ್ಮ ದಂಪತಿ ಪುತ್ರ. ತಂದೆ ಕೃಷಿಕ ಮತ್ತು ಎಲ್​ಐಸಿ ಏಜೆಂಟ್. ತಾಯಿ ಗೃಹಿಣಿ. ಒಳ್ಳೆಯ ಫಲಿತಾಂಶ ಪಡೆಯಬೇಕು ಮತ್ತು ರಾಜ್ಯಕ್ಕೆ ಟಾಪರ್ ಆಗಬೇಕೆಂಬ ತಾತ ಸುಬ್ಬರಾಯಪ್ಪ ಅವರ ಮಾತುಗಳು ಯಶಸ್​ಗೌಡ ಕಠಿಣ ಅಭ್ಯಾಸಕ್ಕೆ ಪ್ರೇರಣೆ ನೀಡಿತು. ತಾತ ನಿಧನರಾಗಿದ್ದಾರೆ. ಆದರೆ, ಅವರ ಮಾತುಗಳಿಂದ ಗುರಿ ಸಾಧನೆ ತೋರಲು ಸಾಧ್ಯವಾಗಿದೆ. ಇನ್ನು ಮಗನ ಸಾಧನೆ ಕಂಡು ದಂಪತಿ ಖುಷಿಯಾಗಿದ್ದಾರೆ.

    ಬಡತನದಲ್ಲೂ ಅನುಪಮ ಸಾಧನೆ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ‘ಎಸ್​ಎಸ್​ಎಲ್​ಸಿ ಕಲಿಕೆ ವರ್ಷದ ಆರಂಭದಲ್ಲೇ ಹೆಚ್ಚಿನ ಅಂಕ ಗಳಿಸಬೇಕು ಎಂಬ ಸಂಕಲ್ಪ ಮಾಡಿ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿತ್ಯ 6 ರಿಂದ 7 ಗಂಟೆಗಳ ಕಾಲ ಅಧ್ಯಯನ ಮಾಡಿದೆ. ಶಿಕ್ಷಕರೊಂದಿಗೆ ಮುಕ್ತವಾಗಿ ರ್ಚಚಿಸಿದೆ. ಅದರ ಫಲವಾಗಿ ಇಂದು ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗಿದೆ. ಬಹಳ ಖುಷಿಯಾಗುತ್ತಿದೆ’. ಇದು ಈ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಕುಮಾರೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಪಮಾ ಶ್ರೀಶೈಲ ಹಿರೇಹೊಳಿ ಮನದಾಳದ ಮಾತು.

    ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆ‘ವಿಜಯವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡ ಅನುಪಮಾ, ಈ ಸಾಧನೆಯನ್ನು ತಮ್ಮ ಪಾಲಕರು ಮತ್ತು ಶಿಕ್ಷಕರಿಗೆ ಅರ್ಪಿಸುವುದಾಗಿ ಹೆಮ್ಮೆಯಿಂದ ಹೇಳಿದರು. ಅನುಪಮಾ ಇಂಗ್ಲಿಷ್-125, ಕನ್ನಡ-100, ಸಮಾಜ ವಿಜ್ಞಾನ -100, ಹಿಂದಿ, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾಳೆ. ‘ಹೆಚ್ಚಿನ ಅಂಕ ಗಳಿಸಬೇಕು ಎಂಬ ಏಕೈಕ ಉದ್ದೇಶದಿಂದ ಮನೆ ಕೆಲಸದ ಜತೆಗೆ ಓದಿಗಾಗಿ ಸಮಯ ಮೀಸಲಿಟ್ಟಿದ್ದೆ. ರಜಾ ದಿನಗಳಲ್ಲಿ ಹೆಚ್ಚಿನ ಸಮಯ ಓದುತ್ತಿದ್ದೆ. ಕಲಿಯುವ ಇಚ್ಛಾಶಕ್ತಿ, ಸ್ಪಷ್ಟವಾದ ಗುರಿ ಇದ್ದರೆ ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ’ ಎಂಬುದು ಅನುಪಮಾ ಅಭಿಪ್ರಾಯ.

    ಭೂಮಿಕಾ ರಾಜ್ಯಕ್ಕೆ ಟಾಪರ್

    ಗುರು-ಶಿಷ್ಯರ ಶ್ರಮ, ಕೋಟೆನಾಡು ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಶೈಕ್ಷಣಿಕ ದಾಖಲೆಉಡುಪಿ: ಬೆಂಗಳೂರಿನ ನ್ಯೂ ಮೆಕಾಲೆ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ ವಿದ್ಯಾರ್ಥಿನಿ, ಉಡುಪಿ ಮೂಲದ ಭೂಮಿಕಾ ಪೈ 625 ಅಂಕಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಉದ್ಯಮಿ ರಮೇಶ್ ಪೈ-ರಮ್ಯಾ ಪೈ ದಂಪತಿ ಪುತ್ರಿ ಭೂಮಿಕಾ, ಬೇಸಿಗೆ ರಜೆ ಕಾರಣಕ್ಕೆ ಸೋಮವಾರ ಕಟಪಾಡಿಯಲ್ಲಿರುವ ಅಜ್ಜಿ ಮನೆಗೆ ಆಗಮಿಸಿದ್ದು, ಫಲಿತಾಂಶ ಪ್ರಕಟಗೊಂಡ ಬಳಿಕ ಸಿಹಿ ಹಂಚಿ ಸಂಭ್ರಮಿಸಿದರು.

    ವಿಜಯವಾಣಿ ಜತೆ ಮಾತನಾಡಿದ ಅವರು, 625 ಅಂಕ ನಿರೀಕ್ಷಿಸಿರಲಿಲ್ಲ. ಮೊದಲ ಬಾರಿಗೆ ಪೂರ್ಣ ಅಂಕ ಗಳಿಸಿದ್ದೇನೆ. ಮನೆಯವರ ಬೆಂಬಲ ಹಾಗೂ ಶಾಲೆಯ ಸಹಕಾರದಿಂದ ಇದು ಸಾಧ್ಯವಾಗಿದೆ. ಕರೊನಾ ಸಮಯದಲ್ಲಿ ಆನ್​ಲೈನ್ ತರಗತಿ ಮಾಡುತ್ತಿದ್ದರಿಂದ ಅನುಕೂಲವಾಗಿದೆ ಎಂದರು.

    ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts