More

    ಬಿಸಿಗಾಳಿ ಲೆಕ್ಕಿಸದೆ ಉತ್ಸಾಹ ತೋರಿದ ಮತದಾರರು

    ನವದೆಹಲಿ: ಹದಿನೆಂಟನೇ ಲೋಕಸಭೆ ಚುನಾವಣೆಯ ಎರಡನೇ ಹಂತಕ್ಕೆ ಏಪ್ರಿಲ್ 26ರಂದು 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಕ್ಷೇತ್ರಗಳಲ್ಲಿ ಬಹುತೇಕ ಶಾಂತಿಯುತ ಮತದಾನ ನಡೆಯಿತು. ಸರಾಸರಿ, ಶೇಕಡ 61ರಷ್ಟು ಮತದಾನ ದಾಖಲಾಗಿದೆ. ಆದರೆ, ಬಹುತೇಕ ರಾಜ್ಯಗಳಲ್ಲಿ 2019ರ ಚುನಾವಣೆಗಿಂತ ಕಡಿಮೆ ಮತದಾನ ದಾಖಲಾಗಿದೆ. ಪಶ್ಚಿಮ ಬಂಗಾಳ, ಕೇರಳದ ಕೆಲವೆಡೆಗಳಲ್ಲಿ ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಸಣ್ಣಪುಟ್ಟ ಘಟನೆ ಜರುಗಿವೆ. ಒಟ್ಟು 1.67 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚುನಾವಣೆ ಆಯೋಗದ ವೇಳಾಪಟ್ಟಿಯಂತೆ 89 ಕ್ಷೇತ್ರಗಳಿಗೆ ಮತದಾನ ನಡೆಯಬೇಕಿತ್ತು. ಆದರೆ, ಮಧ್ಯಪ್ರದೇಶದ ಬೇತುಲ್ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ನಿಧನರಾದ ಹಿನ್ನೆಲೆಯಲ್ಲಿ, ಮತದಾನ ಮುಂದೂಡಲಾಗಿದ್ದು ಮೇ 7ರಂದು ನಡೆಸಲು ನಿರ್ಧರಿಸಲಾಗಿದೆ.

    ಹಲವು ರಾಜ್ಯಗಳಲ್ಲಿ ಬಿಸಿಲಿನ ತಾಪ ಏರಿಕೆಯಾಗಿದ್ದರೂ, ಮತದಾರರು ಉತ್ಸಾಹದಿಂದಲೇ ಮತಗಟ್ಟೆಗೆ ಆಗಮಿಸಿದರು. ಬಹುತೇಕ ಕಡೆ ಬೆಳಗ್ಗೆ ಹೊತ್ತಿನಲ್ಲಿ ಮತಗಟ್ಟೆ ಎದುರು ಉದ್ದದ ಸರತಿ ಸಾಲುಗಳು ಕಂಡುಬಂದವು. ವೃದ್ಧರು, ಮಹಿಳೆಯರು ಮತದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡುಬಂದಿತು. ತ್ರಿಪುರಾದಲ್ಲಿ ಅತಿ ಹೆಚ್ಚು ಹಾಗೂ ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ. ಭದ್ರತೆಗೆ 16 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

    ಹುರಿಯಾಳುಗಳ ಭವಿಷ್ಯ ಇವಿಎಂನಲ್ಲಿ ಭದ್ರ: ಎರಡನೇ ಹಂತದ ಮತದಾನದ ಬಳಿಕ ಅನೇಕ ಘಟಾನುಘಟಿಗಳ ರಾಜಕೀಯ ಭವಿಷ್ಯ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಲ್ಲಿ ಭದ್ರವಾಗಿದೆ. ಕೇರಳದ ವಯನಾಡ್​ನಿಂದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಆಲಪು್ಪಳದಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉತ್ತರಪ್ರದೇಶದ ಮಥುರಾದಿಂದ ಬಿಜೆಪಿಯ ಹೇಮಾಮಾಲಿನಿ, ಮೇರಠ್​ನಿಂದ ಅರುಣ್ ಗೋವಿಲ್, ಅಕೋಲಾದಿಂದ ಪ್ರಕಾಶ್ ಅಂಬೇಡ್ಕರ್ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ. ಅದರಂತೆ, ಛತ್ತೀಸ್​ಗಢದ ರಾಜನಂದಗಾವ್​ನಿಂದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜಸ್ಥಾನದ ಕೋಟಾದಿಂದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಜೋಧಪುರದಿಂದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ತಿರುವನಂಪತಪುರಂನಲ್ಲಿ ಕಾಂಗ್ರೆಸ್​ನಿಂದ ಶಶಿ ತರೂರ್, ಬಿಜೆಪಿಯಿಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ಪರ್ಧಿಸಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

    ಹಲವು ರಾಜ್ಯಗಳಲ್ಲಿ ಪೂರ್ಣಗೊಂಡ ಚುನಾವಣೆ: ಶುಕ್ರವಾರ ಕೇರಳದ ಎಲ್ಲ 20 ಸ್ಥಾನಗಳಿಗೆ ಮತದಾನ ನಡೆಯಿತು. ಅಲ್ಲದೆ, ಶುಕ್ರವಾರ ನಡೆದ ಮತದಾನದೊಂದಿಗೆ ರಾಜಸ್ಥಾನ, ತಮಿಳುನಾಡು, ಮೇಘಾಲಯ, ಮೀಜೊರಂ, ನಾಗಾಲ್ಯಾಂಡ್, ಉತ್ತರಾಖಂಡ, ತ್ರಿಪುರಾ, ಅಂಡಮಾನ್ ನಿಕೋಬಾರ್, ಪುದುಚೇರಿ, ಲಕ್ಷದ್ವೀಪ, ಸಿಕ್ಕಿಂ ಮತ್ತು ತ್ರಿಪುರಾದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

    ಏಳು ಹಂತಗಳ ಚುನಾವಣೆಯ ಮೊದಲ ಹಂತದಲ್ಲಿ ಏಪ್ರಿಲ್ 19ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಚುನಾವಣೆಯ ಮೂರನೇ ಹಂತ ಮೇ 7ರಂದು ನಡೆಯಲಿದ್ದು 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 94 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

    ತಾರಾ ಮೆರುಗು: ಉತ್ತರಪ್ರದೇಶದ 8 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆದಿದ್ದು, ಬಾಲಿವುಡ್ ನಟಿ ಹೇಮಾಮಾಲಿನಿ ಬಿಜೆಪಿ ಅಭ್ಯರ್ಥಿ ಆಗಿರುವ ಮಥುರಾದಲ್ಲಿ, ದೂರದರ್ಶನದ ‘ರಾಮಾಯಣ’ ಧಾರಾವಾಹಿಯ ಖ್ಯಾತಿಯ ರಾಮ ಪಾತ್ರಧಾರಿ ಅರುಣ್ ಗೋವಿಲ್ ಬಿಜೆಪಿ ಅಭ್ಯರ್ಥಿ ಆಗಿರುವ ಮೇರಠ್ ಕ್ಷೇತ್ರಗಳಲ್ಲಿ ತಾರಾ ಕಳೆ ಕಂಡುಬಂತು.

    ಕಣದಲ್ಲಿ 1,210 ಅಭ್ಯರ್ಥಿಗಳು: 18ನೇ ಲೋಕಸಭೆಯ 2ನೇ ಹಂತದ ಈ ಚುನಾವಣೆಯಲ್ಲಿ ಒಟ್ಟು 1,210 ಅಭ್ಯರ್ಥಿಗಳು ಕಣದಲ್ಲಿದ್ದರು. ಆ ಪೈಕಿ ಈ ಹಂತದಲ್ಲಿ ಬಿಎಸ್​ಪಿಯಿಂದ 74, ಬಿಜೆಪಿಯ 69, ಕಾಂಗ್ರೆಸ್​ನ 68 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

    ಎರಡನೇ ಬಾರಿಗೆ ತಂದೆಯಾದ ಕ್ರಿಕೆಟಿಗ ಕೃನಾಲ್ ಪಾಂಡ್ಯ: ಮಗುವಿನ ಹೆಸರು ರಿವೀಲ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts