ನ್ಯೂಸ್

ಬಿದಿರಿನ ಕಡ್ಡಿ, ಸಿರಿಂಜ್​ಗಳು, ಗ್ಲಾಸ್​ ಶೀಲ್ಡ್​; ಬಿಹಾರ ಚುನಾವಣೆಗೆ ಇವೆಲ್ಲ ಏಕೆ ಬೇಕು...?

ನವದೆಹಲಿ: ಕರೊನಾ ಸಂಕಷ್ಟ ಏನೇ ಇರಲಿ, ರಾಜಕಾರಣಿಗಳಿಗೆ ಚುನಾವಣೆಗಿಂತ ಮುಖ್ಯವಾದ ಕೆಲಸ ಇನ್ನೇನಿದೆ ಹೇಳಿ...!

ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳಷ್ಟೇ ಉಳಿದಿವೆ. ನಂತರ ಪಶ್ಚಿಮ ಬಂಗಾಳದ ಚುನಾವಣೆಗೆ ಸಜ್ಜಾಗಬೇಕು. ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಆನ್​ಲೈನ್​ ಮೂಲಕ ಪ್ರಚಾರ ಶುರು ಮಾಡಿವೆ. ಸಾಮಾಜಿಕ ಜಾಲ ತಾಣಗಳ ಮೂಲಕ ವರ್ಚುವಲ್​ ಸಮಾವೇಶ ನಡೆಸುತ್ತಿವೆ.

ಇದು ರಾಜಕಾರಣಿಗಳ ಕತೆಯಾದರೆ, ಅಧಿಕಾರಿಗಳು ಕೂಡ ಸಜ್ಜಾಗಬೇಕಲ್ಲ, ಚುನಾವಣೆಗೆ ಅಗತ್ಯ ಸಿದ್ಧತೆಗಳಲ್ಲಿ ತೊಡಗಿಕೊಂಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಆರಂಭಿಸಿ ಒಟ್ಟಾರೆ ಚುನಾವಣೆ ಪ್ರಕ್ರಿಯೆಗೆ ಏನೆಲ್ಲ ಬೇಕು ಎಂಬುದರ ಪಟ್ಟಿ ಸಿದ್ಧಗೊಳಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸುವಲ್ಲಿ ತೊಡಗಿದ್ದಾರೆ.

ಬಿಹಾರದ ಅಧಿಕಾರಿಗಳು ಸಲ್ಲಿಸಿರುವ ಪಟ್ಟಿಯಲ್ಲಿ ಕೆಲ ಸಾಮಗ್ರಿಗಳ ಇಂತಿವೆ. ಟೂಥ್​ ಪಿಕ್​ನಂಥ ಬಿದಿರಿನ ಕಡ್ಡಿಗಳು, ಒಮ್ಮೆ ಬಳಸಿ ಬಿಸಾಡುವ ಸಿರಿಂಜ್​ಗಳು, ಚುನಾವಣಾಧಿಕಾರಿ, ಸಿಬ್ಬಂದಿ ಮೇಜಿನ ಸುತ್ತ ಗ್ಲಾಸ್​ ಶೀಲ್ಡ್​... ಹೀಗೆ ಸಾಗುತ್ತದೆ ಪಟ್ಟಿ.

ಹೇಳಿ ಕೇಳಿ ಇದು ಕೋವಿಡ್​ ಕಾಲಮಾನದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಹೀಗಾಗಿ ವೈರಸ್​ ಹರಡುವುದನ್ನು ತಡೆಗಟ್ಟಲು ಆದಷ್ಟು ಮಾನವ ಸ್ಪರ್ಶರಹಿತ ವ್ಯವಸ್ಥೆಯನ್ನು ರೂಪಿಸಬೇಕಿದೆ.

ಮತಯಂತ್ರದಲ್ಲಿ ಗುಂಡಿಯನ್ನು ಅದುಮಲು ಬೆರಳಿನ ಬದಲಿನ ಬದಲು ಬಿದಿರಿನ ಕಡ್ಡಿಯನ್ನು ಬಳಸಬಹುದು. ಏಕೆಂದರೆ ಒಂದೊಂದು ಮತ ಚಲಾಯಿಸಿದಾಗ ಅದನ್ನು ಪ್ರತಿ ಬಾರಿಯೂ ಸ್ಯಾನಿಟೈಸ್​ ಮಾಡುವುದು ಕಷ್ಟವಾಗಲಿದೆ. ಇನ್ನು ಬೆರಳಿಗೆ ಶಾಯಿ ಬಳಿಯಲು ಕಡ್ಡಿಯ ಬದಲು ಒಮ್ಮೆ ಬಳಸುವ ಸಿರಿಂಜ್​ಗಳನ್ನು ಉಪಯೋಗಿಸಬಹುದು. ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿ ಜನರೊಂದಿಗೆ ಅಂತರ ಕಾಪಾಡಿಕೊಳ್ಳಲು ಮೇಜಿನ ಸುತ್ತ ಗಾಜಿನ ಅಥವಾ ಪಾರದರ್ಶಕ ಆವರಣ ಮಾಡಿಕೊಳ್ಳಬೇಕಾಗುತ್ತದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ

ಅಂತೆಯೇ ಇವೆಲ್ಲ ವಸ್ತುಗಳು ಬೇಕಾಗುತ್ತವೆ ಎಂಬ ಯೋಜನೆ ಸಿದ್ಧಪಡಿಸಲಾಗಿದೆ. ಇದಲ್ಲದೇ, ಮಾಸ್ಕ್​, ಸ್ಯಾನಿಟೈಸರ್​ಗಳು ಬೇಕೆಬೇಕಲ್ಲ.

ಅಲ್ಲಿಯವರೆಗೆ ಇನ್ನೂ ಯಾವೆಲ್ಲ ಬದಲಾವಣೆಗಳು ಆಗಬಹುದೋ ಯಾರಿಗೆ ಗೊತ್ತು. ಆದರೆ, ಸಿದ್ಧತೆಯನ್ನಂತೂ ಮಾಡಿಕೊಳ್ಳಲೇ ಬೇಕಲ್ಲ...!