ನವದೆಹಲಿ: ವಿದೇಶಗಳಿಗೆ ಹೋಗುವಾಗ ಕೆಲವೊಮ್ಮೆ ವಿಮಾನ ಬದಲಾವಣೆ ಅಥವಾ ಇನ್ನಿತರ ಕಾರಣಗಳಿಗಾಗಿ ಬೇರೊಂದು ದೇಶದಲ್ಲಿ ಇಳಿಯಬೇಕಾದ ಸಂದರ್ಭ ಎದುರಾಗಬಹುದು. ಆಗ, ಆ ದೇಶವನ್ನು ಪ್ರವೇಶಿಸಲು ಅವಕಾಶವಿರುವುದಿಲ್ಲ. ಆದರೆ, ವಿಮಾನ ನಿಲ್ದಾಣದ ಟ್ರಾನ್ಸಿಟ್ ಎರಿಯಾದಲ್ಲಿ ಸಂಚರಿಸಬಹುದು. ತಾಸುಗಟ್ಟಲೇ ಒಮ್ಮೊಮ್ಮೆ ದಿನಗಟ್ಟಲೇ ಕಳೆದರೂ ವಿಮಾನ ಹೊರಡದ್ದರೆ, ಟ್ರಾನ್ಸಿಟ್ ಎರಿಯಾ ಬಿಟ್ಟು ಕದಲುವಂತಿಲ್ಲ.
ಈಗ ಅಂಥದ್ದೇ ಪರಿಸ್ಥಿತಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಗೆ ಎದುರಾಗಿದೆ. ವಿಶೇಷವೆಂದರೆ ಕಳೆದ 55 ದಿನಗಳಿಂದ ಆತ ಟ್ರಾನ್ಸಿಟ್ ಎರಿಯಾದಲ್ಲಿ ಕಾಲ ಕಳೆಯುತ್ತಿದ್ದಾನೆ.
ಸ್ಟಿವನ್ ಸ್ಪಿಲ್ ಬರ್ಗ್ನ 'ದಿ ಟರ್ಮಿನಲ್' ಸಿನಿಮಾದಂತೆಯೇ ಈತ ಇಲ್ಲಿ ದಿನಗಳನ್ನು ಕಳೆಯುತ್ತಿದ್ದಾನೆ. ವಿಮಾನ ನಿಲ್ದಾಣದ ವಾಷ್ರೂಂ, ಟಾಯ್ಲೆಟ್ಗಳನ್ನು ಬಳಸುತ್ತಿದ್ದಾನೆ. ಅಲ್ಲಿನ ಫಾಸ್ಟ್ಫುಡ್ ಮಳಿಗೆಯಲ್ಲಿ ದೊರೆಯುವ ಆಹಾರವನ್ನೇ ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆ. ಅಲ್ಲಿನ ಸೋಫಾ, ಕುರ್ಚಿಗಳ ಮೇಲೆ ಮಲಗುತ್ತಿದ್ದಾನೆ. ಅಧಿಕಾರಿಗಳು, ಈತನಿಗೆ ಸೊಳ್ಳೆಪರದೆ, ಟೂತ್ಪೇಸ್ಟ್, ಆರಾಮ ಕುರ್ಚಿ ಒದಗಿಸಿದ್ದಾರೆ. ಆಹಾರವನ್ನೂ ನೀಡುತ್ತಿದ್ದಾರೆ.
ದಿನಪತ್ರಿಕೆ, ಮ್ಯಾಗಜೀನ್ಗಳನ್ನು ಓದುತ್ತ, ಮನೆಯವರೊಂದಿಗೆ ಫೋನ್ನಲ್ಲಿ ಮಾತನಾಡುತ್ತ ಕಾಲ ಕಳೆಯುತ್ತಿದ್ದಾನೆ. ಹೌಸ್ ಕೀಪಿಂಗ್ ಸಿಬ್ಬಂದಿಯೊಂದಿಗೆ ಹರಟುತ್ತಾನೆ. ಸದ್ಯ ಅಂತಾರಾಷ್ಟ್ರೀಯ ಟ್ರಾನ್ಸಿಟ್ ಏರಿಯಾದಲ್ಲಿ ಈತನೊಬ್ಬನೇ ಇರುವ ಕಾರಣ ಆ ಚಕ್ರಾಧಿಪತ್ಯಕ್ಕೆ ಈತನೇ ರಾಜ ಎನಿಸಿದ್ದಾನೆ.
ಇದಕ್ಕೂ ಒಂದು ವಿಚಿತ್ರ ಹಿನ್ನೆಲೆಯಿದೆ. ಎಡ್ಗರ್ ವಿರುದ್ಧ ಜರ್ಮನಿಯಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಿವೆ. ವಿದೇಶಿ ನೆಲದಲ್ಲಿ ಇರುವುದರಿಂದ ಆತನನ್ನು ವಶಕ್ಕೆ ಪಡೆಯುವಂತಿಲ್ಲ. ಜರ್ಮನಿಗೆ ಬಂದರಷ್ಟೇ ಆತನನ್ನು ಬಂಧಿಸಬಹುದು. ಈ ಕ್ರಿಮಿನಲ್ ಪ್ರಕರಣಗಳಿಂದಾಗಿ ಭಾರತವೂ ಆತನಿಗೆ ವೀಸಾ ನೀಡುತ್ತಿಲ್ಲ. ಹೀಗಾಗಿ ಭಾರತವನ್ನು ಪ್ರವೇಶಿಸುವಂತೆಯೂ ಇಲ್ಲ.
ನಾನು ಪ್ರಯಾಣ ವೆಚ್ಚ ಭರಿಸಬಲ್ಲೆ, ನನ್ನನ್ನು ನನ್ನ ದೇಶಕ್ಕೆ ಕಳುಹಿಸಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ. ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡ ಭಾರತ ಪ್ರವೇಶಿಸುವುದನ್ನು ಬಿಟ್ಟು ಆತ ಎಲ್ಲಿಗೆ ಬೇಕಾದರೂ ಹೋಗಬಹುದು. ಇದಕ್ಕೆ ಎಡ್ಗರ್ಗೆ ಅವಕಾಶವಿದೆ. ಆದರೆ, ಅದಕ್ಕೆ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಆರಂಭವಾಗುವವರೆಗೂ ಆತ ಕಾಯಲೇಬೇಕು. ಅಲ್ಲಿಯವರೆಗೆ ವಿಮಾನ ನಿಲ್ದಾಣದ ಟ್ರಾನ್ಸಿಟ್ ಏರಿಯಾವೇ ಆತನಿಗೆ ಮನೆ, ದೇಶ ಎಲ್ಲವೂ ಆಗಿದೆ.