ಕೋವಿಡ್​ ಪರಿಹಾರ ನಿಧಿಗೆ ಒಂದು ಕೋಟಿ ರೂ. ನೀಡಿದ ಆದಿಚುಂಚನಗಿರಿ ಶ್ರೀಗಳು

Adichunchanagiri Seer2
Published on

ಬೆಂಗಳೂರು: ಆದಿಚುಂಚಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕೋವಿಡ್​ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿಗಳ ದೇಣಿಗೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ಹಾಗೂ ಪ್ರಧಾನ ಮಂತ್ರಿಗಳ ಪಿಎಂ ಕೇರ್ಸ್​ ನಿಧಿಗೆ 50 ಲಕ್ಷ ರೂ.ಗಳನ್ನು ಪ್ರತ್ಯೇಕವಾಗಿ ನೀಡಿದ್ದಾರೆ.

ಸಿಎಂ ಬಿ.ಎಸ್​. ಯಡಿಯೂರಪ್ಪ ಭಾನುವಾರ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆದರು. ಸಿಎಂ ರಾಜಕೀಯ ಕಾರ್ಯದರ್ಶಿ ಎಸ್​. ಆರ್​. ವಿಶ್ವನಾಥ್ ಹಾಗೂ ಶಾಸಕ ಕೃಷ್ಣಪ್ಪ ಸಹ ಹಾಜರಿದ್ದರು.

ಸ್ವಾಮಿಜಿಗಳ ಜತೆ ಪ್ರತ್ಯೇಕವಾಗಿ ಸಿಎಂ ಚರ್ಚೆ ನಡೆಸಿದರು. ಕೋವಿಡ್ ಪರಿಸ್ಥಿತಿ ನಿಯಂತ್ರಣ ಹಿನ್ನೆಲೆ ಸ್ವಾಮೀಜಿ ಹಲವು ಸಲಹೆಯನ್ನು ನೀಡಿದ್ದಾರೆ.

ರಾಜ್ಯದ ಪರಿಸ್ಥಿತಿ, ಹಾಗೂ ಸಮಸ್ಯೆಗಳ ಬಗ್ಗೆ ಶ್ರೀಗಳಿಗೆ ಅರಿವಿದೆ. ಕೋವಿಡ್ ಪರಿಸ್ಥಿತಿ ನಿಯಂತ್ರಣ , ಆರ್ಥಿಕ ಪರಿಸ್ಥಿತಿ ಸುಧಾರಣೆ ಸೇರಿ ಹಲವು ವಿಚಾರಗಳ ಬಗ್ಗೆ ಸ್ವಾಮೀಜಿ ಸಲಹೆ ನೀಡಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ

ಪ್ರಧಾನಿ ಮೋದಿ ಜತೆ ಸೋಮವಾರ (ಮೇ 11) ವಿಡಿಯೋ ಕಾನ್ಫರೆನ್ಸ್ ಇದೆ. ಆ ಸಭೆಯಲ್ಲಿ ಯಾವ ನಿಲುವು ತಳೆಯಬೇಕೆಂಬುದರ ಬಗ್ಗೆಯೂ ಸಮಾಲೋಚನೆ ನಡೆಸಿದ್ದೇನೆ ಎಂದೂ ಯಡಿಯೂರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net