ನ್ಯೂಸ್

ವಾಟ್ಸ್​ಆ್ಯಪ್​ನಲ್ಲಿ ಕೋಟ್ಯಂತರ ರೂ. ಗಳಿಸಿ ಲಕ್ಷುರಿ ಜೀವನ: ಪೊಲೀಸ್​ ತನಿಖೆಯಲ್ಲಿ ಅಸಲಿ ಮುಖವಾಡ ಬಯಲು

ಪಟ್ಟಣಂತಿಟ್ಟ: ಇಂದಿನ ಡಿಜಿಟಲ್​ ಯುಗದಲ್ಲಿ ಅಂತರ್ಜಾಲದ ಬಳಕೆ ಎಲ್ಲೆಡೆ ಹೆಚ್ಚಾಗುತ್ತಿದೆ. ಬಹುತೇಕ ವ್ಯವಹಾರಗಳು ಇಂದು ಆನ್​ಲೈನ್​ನಲ್ಲೇ ನಡೆಯುತ್ತಿರುವ ಪರಿಣಾಮ ನಗದು ಚಲಾವಣೆಯು ಸಹ ಕಡಿಮೆಯಾಗುತ್ತಿದೆ. ಇದರಿಂದ ಹಣ ಕಳ್ಳತನ ಪ್ರಕರಣಗಳು ಕಡಿಮೆಯಾಗಬಹುದು ಅಂದುಕೊಂಡರೆ ಅದು ನಮ್ಮ ತಪ್ಪು. ಏಕೆಂದರೆ ಕಳ್ಳರು ಸಹ ಡಿಜಿಟಲ್​ ಯುಗಕ್ಕೆ ಬದಲಾಗಿದ್ದು, ಡಿಸೈನ್​ ಡಿಸೈನ್​ ಆಗಿ ವಂಚನೆ ಮಾಡುತ್ತಿದ್ದಾರೆ. ಆನ್​ಲೈನ್​ನಲ್ಲಿ ವೇಷ ಬದಲಿಸಿಕೊಂಡು ಅಮಾಯಕ ಜನರ ಕಣ್ಣಿಗೆ ಮಣ್ಣೆರೆಚುವ ದುಷ್ಕೃತ್ಯ ಎಸಗುತ್ತಿದ್ದಾರೆ.

ಇದಕ್ಕೆ ಉದಾಹರಣೆಯಾಗಿ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಘಟನೆಯೊಂದು ನಡೆದಿದೆ. ವಂಚಕನೊಬ್ಬ ವಾಟ್ಸ್​ಆ್ಯಪ್​ ಬಳಸಿಕೊಂಡು ಕೋಟ್ಯಂತರ ರೂಪಾಯಿ ಹಣವನ್ನು ವಂಚನೆ ಮಾಡಿದ್ದಾನೆ. ಕೇರಳ ಕೃಷಿ ಇಲಾಖೆಯ ನಕಲಿ ದಾಖಲೆಗಳನ್ನು ಇಟ್ಟುಕೊಂಡು, ಮಲೇಷಿಯಾದ ತೆಂಗಿನ ಸಸಿಗಳು ಸೇರಿದಂತೆ ಉತ್ತಮ ಗುಣಮಟ್ಟದ ಬೆಳೆಗಳನ್ನು ಕೊಡಿಸುವುದಾಗಿ ಸಾಕಷ್ಟು ಮಂದಿಯನ್ನು ನಂಬಿಸಿ ವಂಚನೆ ಎಸಗಿದ್ದಾನೆ.

ಪುನ್ನವೇಲಿ ಮೂಲದ ವಿಪಿ ಜೇಮ್ಸ್ ಎಂಬಾತನನ್ನು ತಿರುವಳ್ಳ ಪೊಲೀಸರು ಬಂಧಿಸಿದ್ದಾರೆ. ವಾಟ್ಸ್​ಆ್ಯಪ್​ ಮತ್ತು ಆಫ್‌ಲೈನ್ ಮೂಲಕ ಕೇರಳದ ಅಗ್ರಿಕಲ್ಚರಲ್ ಫಾರ್ಮ್‌ನ ನಕಲಿ ಐಡಿಗಳೊಂದಿಗೆ ತನ್ನನ್ನು ಪರಿಚಯಿಸಿಕೊಳ್ಳುತ್ತಿದ್ದ. ನಂತರ ತನ್ನ ಬಳಿ ಗುಣಮಟ್ಟದ ಬೀಜಗಳು ಇವೆ ಎಂದು ಜನರನ್ನು ನಂಬಿಸುತ್ತಿದ್ದ. ಇದೇ ರೀತಿ ಮಲೇಷಿಯಾದ ತೆಂಗಿನ ಸಸಿ ಕೊಡುವುದಾಗಿ ಹೇಳಿ ತಿರುವಳ್ಳ ನಿವಾಸಿಯಿಂದ 6 ಲಕ್ಷಕ್ಕೂ ಹೆಚ್ಚು ಹಣವನ್ನು ಸುಲಿಗೆ ಮಾಡಿದ್ದನು.

ರಂಬುಟಾನ್ ಸಸಿ, ಅಡಕೆ, ತೆಂಗಿನ ಸಸಿ, ಹಲಸಿನ ಸಸಿಗಳನ್ನು ಕೊಡಿಸುವುದಾಗಿ ಹೇಳಿ ರಾಜ್ಯದೆಲ್ಲೆಡೆ ಹಲವರನ್ನು ಈತ ವಂಚಿಸಿದ್ದಾನೆ. ಪೊಲೀಸರಿಗೆ ಬಂದಿರುವ ದೂರುಗಳ ಪ್ರಕಾರ ಜೇಮ್ಸ್ 1 ಕೋಟಿ 20 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಇನ್ನೂ ಹೆಚ್ಚಿನ ದೂರುಗಳು ಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಸ್ಥಳೀಯರನ್ನು ವಂಚಿಸಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಸದ್ಯ ಬಂಧಿತ ಆರೋಪಿಯನ್ನು ತಿರುವಳ್ಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ರಿಮ್ಯಾಂಡ್​ಗೆ ನೀಡಲಾಗಿದೆ. (ಏಜೆನ್ಸೀಸ್​)