ನ್ಯೂಸ್

ಕಳೆದುಹೋದ ಮೊಬೈಲು, ಗೋಲುಗಳೆಲ್ಲ ಬಟಾಬಯಲು!; ಅಂಥದ್ದೇನಿದ್ದವು?

ನವದೆಹಲಿ: ಹೊಸ ವರ್ಷ ಬಂತೆಂದರೆ ಬಹುತೇಕ ಮಂದಿ ನಿರ್ಣಯಗಳನ್ನು ಕೈಗೊಂಡು, ಈ ವರ್ಷ ನಾನು ಹಾಗಾಗಬೇಕು, ಹೀಗಾಗಬೇಕು ಎಂದು ಸಂಕಲ್ಪ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ನಾನು ಜೀವನದಲ್ಲಿ ಏನೇನಾಗಬೇಕು ಎಂಬ ಗೋಲು ಹಾಕಿಕೊಂಡು ಅದನ್ನು ತನ್ನ ಮೊಬೈಲ್​ಫೋನ್​ನಲ್ಲಿ ಫೀಡ್​ ಮಾಡಿಕೊಂಡಿದ್ದ. ಆದರೆ ಆತನ ಗೋಲುಗಳೆಲ್ಲ ಬಟಾಬಯಲಾಗಿವೆ.

ಹೌದು.. ಮೊಬೈಲ್​ಫೋನ್​ ಕಳೆದುಹೋದ ಪರಿಣಾಮವಾಗಿ ಈತನ ಗೋಲುಗಳು ಜಗಜ್ಜಾಹೀರಾಗಿವೆ. ಅದರಲ್ಲಿ ಕೆಲವು ತಮಾಷೆ ಅನಿಸುವಂಥ ವಿಚಿತ್ರ ಗೋಲುಗಳು ಕೂಡ ಇವೆ ಎಂಬುದೇ ಗಮನಾರ್ಹ. ಶಿಯಾ ಸೆಡ್ಗ್​ಮನ್ ಎಂಬಾತನಿಗೆ ಆ ಮೊಬೈಲ್​ಫೋನ್​ ಸಿಕ್ಕಿದ್ದು, ಈತ ಅದರಲ್ಲಿ ಫೀಡ್ ಆಗಿರುವ ಗೋಲುಗಳನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ಆಸ್ಟ್ರೇಲಿಯಾದ ಪೆರಿಶರ್ ವ್ಯಾಲಿಯ ಪೆರಿಶರ್ ಸ್ಕಿ ರೆಸಾರ್ಟ್​ಗೆ ಸ್ಕಿಯಿಂಗ್​ಗೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಮೊಬೈಲ್​ಫೋನ್ ಕಳೆದುಕೊಂಡಿದ್ದ. ಅದು ಶಿಯಾಗೆ ಸಿಕ್ಕಿದ್ದು, ಆತ ಅದನ್ನು ಎತ್ತಿಕೊಂಡು ನೋಡಿದಾಗ ಲಾಕ್​ಸ್ಕ್ರೀನ್​ನಲ್ಲೇ ಆ ವ್ಯಕ್ತಿ ಫೀಡ್​ ಮಾಡಿಕೊಂಡಿದ್ದ ಗೋಲುಗಳು ಕಾಣಿಸಿವೆ. ಜೀವನದ ಗೋಲುಗಳು ಅಂತ ಆತ 8 ಸಂಗತಿಗಳನ್ನು ಅಲ್ಲಿ ಫೀಡ್ ಮಾಡಿಟ್ಟುಕೊಂಡಿದ್ದ.

ಈ ಮೊಬೈಲ್​ಫೋನ್​ನ ಲಾಕ್​ಸ್ಕ್ರೀನ್​ ತನ್ನ ಫೇಸ್​ಬುಕ್ ಗ್ರೂಪ್​ವೊಂದರಲ್ಲಿ ಹಂಚಿಕೊಂಡಿದ್ದ ಶಿಯಾ, ಬಳಿಕ ಅದನ್ನು ರೆಸಾರ್ಟ್​ ರಿಸೆಪ್ಷನ್​ನಲ್ಲಿ ನೀಡಿದ್ದ. ಬಳಿಕ ಅದು ಸಂಬಂಧಪಟ್ಟವರಿಗೆ ತಲುಪಿದೆ ಎಂದು ರೆಸಾರ್ಟ್​ನವರು ಹೇಳಿದ್ದಾಗಿಯೂ ಆತ ಮಾಹಿತಿ ಹಂಚಿಕೊಂಡಿದ್ದ.

ನಿಕೋಟಿನ್​ ಬಿಡಬೇಕು, ಬ್ಯಾಂಕ್ ಅಕೌಂಟ್​ನಲ್ಲಿ 25 ಸಾವಿರ ಡಾಲರ್ ಇರಬೇಕು, ಮೂವರು ಯುವತಿಯರೊಂದಿಗೆ ಏಕಕಾಲದಲ್ಲಿ ಡೇಟಿಂಗ್ ಮಾಡಬೇಕು, ಬಲಿಷ್ಠನಾಗಬೇಕು, ಮೋಟರ್​ಬೈಕ್ ಹೊಂದಬೇಕು ಹಾಗೂ ಮೂರು ತಿಂಗಳು ಕಟಿಂಗ್ ಮಾಡಿಕೊಳ್ಳಬಾರದು ಎಂಬುದು ಆತನ ಜೀವನದ 8 ಗೋಲುಗಳಲ್ಲಿ ಪ್ರಮುಖವಾದವು. ಇದನ್ನೇ ಉದಾಹರಣೆ ಆಗಿಸಿಕೊಂಡ ರೆಸಾರ್ಟ್​ನವರು ಸ್ಕಿಯಿಂಗ್ ವೇಳೆ ಸ್ಲೋಪ್​​ನಲ್ಲಿ ನಿಮ್ಮ ವಸ್ತುಗಳ ಕುರಿತು ಎಚ್ಚರಿಕೆಯಿಂದಿರಿ ಎಂಬ ಸಂದೇಶವನ್ನು ಕೂಡ ಸಾರಿದ್ದಾರೆ.