ನ್ಯೂಸ್

ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಚೀನಾದ ಐದು ಕಂಟಕಗಳು..!

ವಾಷಿಂಗ್ಟನ್​: ಚೀನಾ ವಿರುದ್ಧದ ತನ್ನ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸಿರುವ ಅಮೆರಿಕ, ಕಳೆದ ಎರಡು ದಶಕಗಳಲ್ಲಿ ಐದು ಸಾಂಕ್ರಾಮಿಕ ಮಹಾಮಾರಿಗಳು ಚೀನಾದಿಂದಲೇ ಉದ್ಭವಿಸಿವೆ ಎಂದು ಮತ್ತೊಂದು ಬಾಂಬ್​ ಸಿಡಿಸಿದೆ.

ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್​ ಒ'ಬ್ರಿಯಾನ್​, ಕಳೆದ ಇಪ್ಪತ್ತು ವರ್ಷಗಳಲ್ಲಿ ಚೀನಾದಿಂದ 5 ಸಾಂಕ್ರಾಮಿಕ ಮಹಾಮಾರಿಗಳು ಹುಟ್ಟಿಕೊಂಡು ಜಗತ್ತನ್ನು ವ್ಯಾಪಿಸಿವೆ. ಇದೆಲ್ಲವೂ ಒಂದು ಹಂತದಲ್ಲಿ ಕೊನೆಗಾಣಲೇಬೇಕು ಎಂದು ಎಚ್ಚರಿಸಿದ್ದಾರೆ.

ಜಗತ್ತಿನಾದ್ಯಂದ 2.5 ಲಕ್ಷಕ್ಕೂ ಹೆಚ್ಚು ಬಲಿ ಪಡೆದಿರುವ, 42 ಲಕ್ಷಕ್ಕೂ ಅಧಿಕ ಜನರಿಗೆ ಅಂಟಿಕೊಂಡಿರುವ ಕರೊನಾ ವೈರಸ್​ ಹರಡುವುದಕ್ಕೆ ಚೀನಾವನ್ನೇ ಹೊಣೆಯಾಗಿಸಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಬರ್ಟ್​, ಚೀನಾದ ಪ್ರಯೋಗಾಲಯಗಳಿರಲಿ ಅಥವಾ ಜೀವಂತ ಪ್ರಾಣಿಗಳ ಮಾಂಸ ಮಾರಾಟ ಮಾಡುವ ಮಾರುಕಟ್ಟೆಗಳಿರಲಿ, ಸಾಂಕ್ರಾಮಿಕ ಮಾರಿಗಳು ಚೀನಾದಿಂದ ಉದ್ಭವಿಸಿ ವ್ಯಾಪಿಸುವುದನ್ನು ಸಹಿಸಲಾಗುವುದಿಲ್ಲ. ಹೀಗೆಂದು ಇಡೀ ಜಗತ್ತು ಒಂದಾಗಿ ಎದ್ದು ನಿಂತು ಚೀನಾಗೆ ಹೇಳಲಿದೆ ಎಂದು ರಾಬರ್ಟ್​ ಪ್ರತಿಪಾದಿಸಿದರು.

ಕರೊನಾ ವೈರಸ್​ ಚೀನಾದ ವುಹಾನ್ ನಗರದಿಂದಲೇ ಹರಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರ ಜನ್ಮಸ್ಥಳ ಪ್ರಯೋಗಾಲಯ ಅಥವಾ ಮಾಂಸ ಮಾರುಕಟ್ಟೆಯೇ ಆಗಿದೆ ಎಂಬುದಕ್ಕೆ ಸಾಂದರ್ಭಿಕ ಸಾಕ್ಷ್ಯಗಳಿವೆ ಎಂದು ಹೇಳಿದರು.

ಕಳೆದ ಎರಡು ದಶಕಗಳಲ್ಲಿ ಚೀನಾದಿಂದ ಐದು ಸಾಂಕ್ರಾಮಿಕ ರೋಗಗಳ ವೈರಸ್​ ಹರಡಿದೆ. ಸಾರ್ಸ್​, ಏವಿಯನ್​ ಫ್ಲೂ, ಸ್ವೈನ್​ ಫ್ಲೂ ಹಾಗೂ ಕರೊನಾ ವೈರಸ್​ ಎಂದು ರಾಬರ್ಟ್​ ಹೆಸರಿಸಿದರು. ಆದರೆ, ಐದನೇ ವೈರಸ್​ ಯಾವುದು ಎಂದು ಹೇಳಲಿಲ್ಲ. ಚೀನಾದಿಂದ ಹರಡಿ ಜಗತ್ತಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೇ ಗಂಡಾಂತರಕ್ಕೆ ಸಿಲುಕಿಸಿರುವ ಸ್ಥಿತಿಯನ್ನು ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು ಎಂದು ರಾಬರ್ಟ್​ ಪ್ರಶ್ನಿಸಿದರು.

ಸದ್ಯ ಅಮೆರಿಕದಲ್ಲಿ 13.7 ಲಕ್ಷ ಜನರು ಕರೊನಾ ಸೋಂಕಿತರಾಗಿದ್ದರೆ, 82 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.