ನ್ಯೂಸ್

ಕಳ್ಳರಾದ ಪೊಲೀಸರು!; ವಶಪಡಿಸಿಕೊಂಡ ಮದ್ಯ, ಟೇಬಲ್ ಫ್ಯಾನ್‌ ಕದಿಯುತ್ತಿದ್ದ ಐವರು ಬಂಧನ

ಗುಜರಾತ್‌: ಪೊಲೀಸ್ ಠಾಣೆಯಿಂದ 1.97 ಲಕ್ಷ ರೂ. ಮೌಲ್ಯದ 125 ವಶಪಡಿಸಿಕೊಂಡ ಮದ್ಯದ ಬಾಟಲಿಗಳು ಮತ್ತು 15 ಟೇಬಲ್ ಫ್ಯಾನ್‌ಗಳನ್ನು ಕದ್ದಿದ್ದಕ್ಕಾಗಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ASI) ಸೇರಿದಂತೆ ಐವರು ಪೊಲೀಸರನ್ನು ಬಂಧಿಸಿದ ಘಟನೆ ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.

ಖಾನ್‌ಪುರ ತಾಲೂಕಿನ ಬಾಕೋರ್ ಪೊಲೀಸ್ ಠಾಣೆಯ ಮಹಿಳಾ ಲಾಕ್‌ಅಪ್‌ನಲ್ಲಿ ಮದ್ಯದ ಬಾಟಲಿಗಳು ಮತ್ತು ಫ್ಯಾನ್‌ಗಳನ್ನು ಸಂಗ್ರಹಿಸಿ ಇಡಲಾಗಿತ್ತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಪಿಎಸ್ ವಾಲ್ವಿ ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ವಾಲ್ವಿ, "ಬಾಕೋರ್ ಪೊಲೀಸರು, ಭಾರತೀಯ ನಿರ್ಮಿತ ವಿದೇಶಿ 482 ಮದ್ಯದ ಬಾಟಲಿಗಳು (ಐಎಂಎಫ್‌ಎಲ್) ಮತ್ತು 75 ಟೇಬಲ್ ಫ್ಯಾನ್‌ಗಳನ್ನು ಅದರ ಬಾಕ್ಸ್​ ಹಿಂದೆ ಬಚ್ಚಿಟ್ಟು ಗುಜರಾತ್‌ಗೆ ಮದ್ಯವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯಿಂದ ವಶಪಡಿಸಿಕೊಂಡಿದ್ದಾರೆ. ಅಂತಹ ವಸ್ತುಗಳನ್ನು ಸಂಗ್ರಹಿಸಲು ಉದ್ದೇಶಿಸಲಾದ ಕೊಠಡಿಯು ತುಂಬಿದ್ದ ಕಾರಣ ಅವುಗಳನ್ನು ಮಹಿಳೆಯರ ಲಾಕ್-ಅಪ್ನಲ್ಲಿ ಇರಿಸಲಾಗಿತ್ತು" ಎಂದು ಹೇಳಿದ್ದಾರೆ.

"ಹಿರಿಯ ಅಧಿಕಾರಿಗಳ ಭೇಟಿಗೆ ಮುಂಚಿತವಾಗಿ, ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡ ವಸ್ತುಗಳ ದಾಖಲೆಯನ್ನು ನೀಡುವಂತೆ ಕೇಳಿದ್ದಾರೆ. ಆದಾಗ್ಯೂ, ಲಾಕ್-ಅಪ್ ಸ್ವಚ್ಛಗೊಳಿಸುವಾಗ, IMFL ಬಾಟಲಿಗಳು ಮತ್ತು ಫ್ಯಾನ್​ಗಳ ಖಾಲಿ ಅಥವಾ ಮುರಿದ ಪೆಟ್ಟಿಗೆಗಳು ಕಂಡುಬಂದಿವೆ. ಪರಿಶೀಲನೆ ನಡೆಸಿದಾಗ, 1.57 ಲಕ್ಷ ಮೌಲ್ಯದ 125 ಐಎಂಎಫ್‌ಎಲ್ ಬಾಟಲಿಗಳು ಮತ್ತು 40,500 ರೂಪಾಯಿ ಮೌಲ್ಯದ 15 ಫ್ಯಾನ್‌ಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ನ.13 ರಂದು ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಡಿಎಸ್‌ಪಿ ವಾಲ್ವಿ ಹೇಳಿದರು.

ಎಫ್‌ಐಆರ್‌ ಪ್ರಕಾರ, ಎಎಸ್‌ಐ ಅರವಿಂದ್‌ ಖಾನ್‌ ಅಕ್ಟೋಬರ್‌ 25ರ ರಾತ್ರಿ ಕರ್ತವ್ಯದಲ್ಲಿದ್ದಾಗ ಕಳ್ಳತನಕ್ಕೆ ಯೋಜನೆ ರೂಪಿಸಿದ್ದಾರೆ. ಅವರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿದೆ. ದೃಶ್ಯದಲ್ಲಿ ಖಾಂತ್ ಮತ್ತು ಹೆಡ್ ಕಾನ್‌ಸ್ಟೆಬಲ್ ಲಲಿತ್ ಪರ್ಮಾರ್ ರಾತ್ರಿ 10 ಗಂಟೆಯ ಸುಮಾರಿಗೆ ಲಾಕ್-ಅಪ್‌ ತೆರೆದು ಕೆಲವು ಮದ್ಯದ ಬಾಟಲಿಗಳನ್ನು ಹೊತ್ತುಕೊಂಡು ಹೊರಬರುವುದನ್ನು ತೋರಿಸಿದೆ.

ಖಂತ್ ಕೆಲ ಸಮಯ ಸಿಸಿಟಿವಿ ಕ್ಯಾಮರಾಗಳನ್ನು ಆಫ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 380 (ಕಳ್ಳತನ) ಮತ್ತು ಇತರ ಸಂಬಂಧಿತ ಅಪರಾಧಗಳ ಅಡಿಯಲ್ಲಿ ಖಂತ್, ಪರ್ಮಾರ್ ಮತ್ತು ಇತರ ಮೂವರು ಪೊಲೀಸರನ್ನು ಬಂಧಿಸಲಾಗಿದ್ದು, ಆರನೇ ಆರೋಪಿ, ಅವರಿಗೆ ಸಹಾಯ ಮಾಡಿದ ಸ್ಥಳೀಯ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).