ಕೊಡಗು: ಉದ್ಯಮಿಯೊಬ್ಬರ ಮನೆ ಮೇಲೆ ಗುಂಡಿನ ದಾಳಿಯಾಗಿದ್ದು, ಅದೇ ಸಮಯದಲ್ಲಿ ಅಂಗಳದಲ್ಲಿ ಆಡುತ್ತಿದ್ದ ಪುತ್ರ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರೆ, ಸಾಕುನಾಯಿಗಳಿಗೆ ಗುಂಡು ತಗುಲಿ ಒಂದು ಶ್ವಾನ ಸಾವಿಗೀಡಾಗಿದೆ.
ಕೊಡಗು ಜಿಲ್ಲೆಯ ಟಿ. ಶೆಟ್ಟಿಗೇರಿ ಸಮೀಪ ಇಂದು ಸಂಜೆ ಐದು ಗಂಟೆಯ ಸುಮಾರಿಗೆ ಈ ಪ್ರಕರಣ ನಡೆದಿದೆ. ಉದ್ಯಮಿ ಅನೀಶ್ ಮಾದಪ್ಪ ಎಂಬವರ ಮನೆ ಮೇಲೆ ಈ ದಾಳಿ ನಡೆದಿದೆ. ಮನೆಯಂಗಳಲ್ಲಿ ಆಡುತ್ತಿದ್ದ ಪುತ್ರ ಆಯುಷ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ನಾಯಿಗೂಡಿನಲ್ಲಿದ್ದ ಶ್ವಾನಗಳಿಗೆ ಗುಂಡು ತಗುಲಿದ್ದು, ಒಂದು ಶ್ವಾನ ಸಾವಿಗೀಡಾದರೆ ಇನ್ನೆರಡು ಗಂಭೀರವಾಗಿ ಗಾಯಗೊಂಡಿವೆ.
ಮನೆಯಲ್ಲಿ ಅನೀಶ್ ಮಾದಪ್ಪ ಪತ್ನಿ ಮತ್ತು ಪುತ್ರ ಇದ್ದಾಗ ಈ ಗುಂಡಿನ ದಾಳಿ ನಡೆದಿದ್ದು, ಪುತ್ರ ತೀರಾ ಆಘಾತಕ್ಕೆ ಒಳಗಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎ.ಟಿ.ಸೋಮಣ್ಣ ಎಂಬವರ ಮೇಲೆ ಅನೀಶ್ ಮಾದಪ್ಪ ಪತ್ನಿ ಪಾರ್ವತಿ ಕೊಲೆಯತ್ನ ದೂರು ದಾಖಲಿಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.