ನ್ಯೂಸ್

ಜೆಡಿಎಸ್ ಕಾನೂನು ಘಟಕ ಅಧ್ಯಕ್ಷರ ವಿರುದ್ಧ ಎಫ್​ಐಆರ್; ಬಿಜೆಪಿ ಅಭ್ಯರ್ಥಿಯ ತೇಜೋವಧೆ ಹಿನ್ನೆಲೆಯಲ್ಲಿ ಕ್ರಮ

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಎಫ್​​ಐಆರ್ ದಾಖಲಾಗಿವೆ.

ಯಶವಂತಪುರ ವಿಧಾನಸಭಾ ಕ್ಷೇತ್ರ ಕಾನೂನು ವಿಭಾಗ ಉಸ್ತುವಾರಿ ಕೆ.ಟಿ. ಶ್ರದ್ಧಾನಂದ, ಈ ಕುರಿತು ಕೆಂಗೇರಿ ಠಾಣೆಗೆ ಪ್ರತ್ಯೇಕ ಎರಡು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಜೆಡಿಎಸ್ ಕಾನೂನು ಘಟಕ ಅಧ್ಯಕ್ಷ ಎ.ಪಿ. ರಂಗನಾಥ್ ಮತ್ತು ಟಿ.ಎನ್. ಜವರಾಯಿಗೌಡ ಬಳಗ, ಜೆಡಿಎಸ್ ಯಶವಂತಪುರ ಆ್ಯಂಡ್ ಜೆಡಿಎಸ್ ಯೂತ್ ಕರುನಾಡು ಜಾಲತಾಣದ ಮುಖ್ಯಸ್ಥರ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ದೂರಿನಲ್ಲಿ ಏಪ್ರಿಲ್ 10ರಂದು ಎ.ಪಿ. ರಂಗನಾಥ್, ಫೇಸ್‌ಬುಕ್ ಖಾತೆಯಲ್ಲಿ ಸೋಮಶೇಖರ್ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡದೆ ಲೂಟಿ ಮಾಡಿ ರಾಸಲೀಲೆ ಸಿಡಿಗೆ ತಡೆಯಾಜ್ಞೆ ತಂದಿದ್ದಾರೆ ಎಂಬ ತೇಜೋವಧೆ ಮಾಡಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿ ವೈರಲ್ ಮಾಡಿದ್ದಾರೆ. ಇದರಿಂದ ಮತದಾರರಲ್ಲಿ ಬಿಜೆಪಿ ಅಭ್ಯರ್ಥಿ ಕುರಿತು ಕೆಟ್ಟ ಭಾವನೆ ಮೂಡಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತೊಂದು ದೂರಿನಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಟಿ.ಎನ್. ಜವರಾಯಿಗೌಡರ ಫೇಸ್‌ಬುಕ್ ಖಾತೆ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾರ್ಚ್ 17ರಂದು ಎಸ್.ಟಿ. ಸೋಮಶೇಖರ್‌ಗೆ ತೇಜೋವಧೆ ಮಾಡುವಂತಹ ಪೋಸ್ಟರ್, ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಸ್ಯಾಂಟ್ರೋ ರವಿ ವಿಡಿಯೋ ಮತ್ತು ಫೋಟೋಗಳನ್ನು ತಿರುಚಿ ವೈರಲ್ ಮಾಡಿದ್ದಾರೆ. ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ವಕೀಲ ಕೆ.ಟಿ.ಶ್ರದ್ಧಾನಂದ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.