

ಕಲಬುರಗಿ: ಚುನಾವಣೆ ಸಂದರ್ಭ ಪ್ರಚಾರದ ವೇಳೆ ನಾನಾ ವಿಚಾರಗಳು ಮುನ್ನೆಲೆಗೆ ಬರುವುದು ನಡೆಯುತ್ತಿರುತ್ತವೆ. ಕಲಬುರಗಿ ಜಿಲ್ಲೆಯಲ್ಲೂ ಅಂಥದ್ದೇ ಒಂದು ಸಂಗತಿ ನಡೆದಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿಷಯವೊಂದನ್ನು ಪ್ರಸ್ತಾಪ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಭಾಗಿಯಾಗಿರುವ ನಿರ್ಮಲಾ ಸೀತಾರಾಮನ್, ಸುಭಾಷ್ ಗುತ್ತೇದಾರ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಸುಭಾಷ್ ಗುತ್ತೇದಾರ್ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಈಗ ಐದನೇ ಬಾರಿ ನೀವು ಅವರನ್ನು ಆಶೀರ್ವದಿಸಬೇಕು ಎನ್ನುವ ಮೂಲಕ ಅವರಿಗೇ ಮತ ಚಲಾಯಿಸುವಂತೆ ಮನವಿ ಮಾಡಿದರು.
ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗದ ಪೂಜೆ ಕುರಿತ ವಿಚಾರವನ್ನು ಇದೇ ವೇಳೆ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್, ದರ್ಗಾದಲ್ಲಿನ ಶಿವಲಿಂಗ ಪೂಜೆ ಅವಕಾಶ ನಮಗೆ ಬೇಕು ಎಂದರು. ಶಿವಲಿಂಗ ಪೂಜೆ ನಮ್ಮ ಹಕ್ಕು, ಆದರೆ ಪೂಜೆ ಮಾಡುವುದಕ್ಕೂ ಜೀವಭಯ ನಿರ್ಮಾಣವಾಗಿದೆ, ಪೂಜೆ ಮಾಡಲು ಕಾನೂನು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಮಹಿಳೆಯರ ಸ್ವಸಹಾಯ ಸಂಘಗಳ ಉತ್ತೇಜನಕ್ಕೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ ಎಂದ ಅವರು, ಮಹಿಳೆಯರು ಕೂಡ ಹೆಚ್ಚು ಹೆಚ್ಚು ಸ್ಟಾರ್ಟಪ್ಗಳಲ್ಲಿ ಭಾಗಿಯಾಗಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಸೌಲಭ್ಯ ಕಲ್ಪಿಸಿದೆ ಎಂದು ಸಚಿವೆ ನಿರ್ಮಲಾ ಹೇಳಿದರು.