Farmer Hires Helicopter : ಕೇವಲ ರೈತ ತಾನೇ ಎಂಬ ನಿರ್ಲಕ್ಷ್ಯ ಮನೋಭಾವ ಇರಬಾರದು. ರೈತ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತಾನೆ ಎಂಬುವುದಕ್ಕೆ ಈ ಒಂದು ಘಟನೆ ಸಣ್ಣ ಉದಾಹರಣೆಯಾಗಿದೆ. ಉತ್ತರ ಪ್ರದೇಶದ ರಬುಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ರುಸ್ತಂಪುರ್ ಗ್ರಾಮದ ರೈತನೊಬ್ಬ ತನ್ನ ನವಿವಾಹಿತ ಮಗಳಿಗೆ ಹೆಲಿಕಾಪ್ಟರ್ ಮೂಲಕ ಬೀಳ್ಕೊಡುಗೆ ಕೊಟ್ಟಿದ್ದಾರೆ.
ಅಚ್ಚರಿಯ ಸಂಗತಿ ಏನೆಂದರೆ, ವಧುವಿನ ತಾಯಿಯ ಮನೆಯಿಂದ ಅತ್ತೆಯ ಮನೆಗೆ ಇರುವ ಅಂತರ ಕೇವಲ 14 ಕಿಲೋಮೀಟರ್. ಇದಕ್ಕಾಗಿ ರೈತ ಸುಮಾರು ಎಂಟು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇದಿಷ್ಟೇ ಅಲ್ಲದೆ, ಗೌತಮ್ ಬುದ್ಧನಗರ ಪೊಲೀಸ್ ಕಮಿಷನರೇಟ್‌ನ ಎಸಿಪಿ ಮೇಲ್ವಿಚಾರಣೆಯಲ್ಲಿ ಒಂಬತ್ತು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು 18 ಕಾನ್ಸ್ಟೆಬಲ್ಗಳು ಈ ವೇಳೆ ಭದ್ರತಾ ಕರ್ತವ್ಯವನ್ನು ಸಹ ವಹಿಸಿಕೊಂಡಿದ್ದರು.
ವಿವರಗಳ ಪ್ರಕಾರ, ರೈತ ಸುಭಾಷ್ ಸಿಂಗ್ ಅವರ ಪುತ್ರಿ ಅಂಜಲಿ ರಜಪೂತ್ ಅವರ ವಿವಾಹವನ್ನು ಕಳೆದ ಗುರುವಾರ ರುಸ್ತಂಪುರ್ ಗ್ರಾಮದಲ್ಲಿ ನೆರವೇರಿಸಲಾಯಿತು. ವರ ಅಮನ್, ವೃತ್ತಿಯಲ್ಲಿ ಫಾರ್ಮಸಿಸ್ಟ್. ಈತ ಮೂಲತಃ ಮಹ್ಮದಪುರ್ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಬುಲಂದ್‌ಶಹರ್‌ನ ಕಾಕೋಡ್‌ನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ವಧು ಅಂಜಲಿಯನ್ನು ಕರೆದೊಯ್ಯಲು ವರ ಅಮನ್, ಶುಕ್ರವಾರ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದಾಗ ರುಸ್ತಂಪುರ್ ಗ್ರಾಮದಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ಹೆಲಿಕಾಪ್ಟರ್ ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಜಮಾಯಿಸಿದ್ದರು.
ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆಗಾಗಿ ಎಸಿಪಿ ನೇತೃತ್ವದಲ್ಲಿ ಒಂಬತ್ತು ಇನ್ಸ್‌ಪೆಕ್ಟರ್‌ಗಳು ಮತ್ತು 18 ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿತ್ತು. ಇದಕ್ಕಾಗಿ ವಧುವಿನ ತಂದೆ, ಪೊಲೀಸ್ ಕಮಿಷನರ್ ಬಳಿ ಮನವಿ ಮಾಡಿದ್ದರು. ಅನುಮತಿ ಸಿಕ್ಕ ಬಳಿಕ ಭದ್ರತಾ ವ್ಯವಸ್ಥೆಗಾಗಿ ಪೊಲೀಸರು ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಸ್ಥಳಕ್ಕೆ ಬಂದರು, ಆದರೆ ಹೆಲಿಕಾಪ್ಟರ್ ಮೂಲಕ ವಧುವಿನ ಬೀಳ್ಕೊಡುಗೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಡೆಯಿತು.
ಅಂಜಲಿಯ ಬೀಳ್ಕೊಡುಗೆಯನ್ನು ಆರಂಭದಲ್ಲಿ ಮದುವೆಯಾದ ರಾತ್ರಿಯಂದೇ ಯೋಜಿಸಲಾಗಿತ್ತು. ಆದರೆ, ಹವಾಮಾನ ಪರಿಸ್ಥಿತಿಗಳಿಂದಾಗಿ ಶುಕ್ರವಾರ ಮಧ್ಯಾಹ್ನದವರೆಗೆ ವಿಳಂಬವಾಯಿತು. ಹೆಲಿಕಾಪ್ಟರ್ ಅನ್ನು ಹತ್ತಿರದಿಂದ ನೋಡಿದ ಸ್ಥಳೀಯರು ನಮ್ಮಲ್ಲಿ ಯಾರೂ ಮರೆಯಲಾಗದ ದೃಶ್ಯವಿದು ಎಂದರು. ನಾವು ಕಾರುಗಳು ಮತ್ತು ಕುದುರೆಗಳನ್ನು ನೋಡಿದ್ದೇವೆ, ಆದರೆ ಹೆಲಿಕಾಪ್ಟರ್ ನೋಡಿರಲಿಲ್ಲ. ಇದೇ ಮೊದಲನೆಯದು ಎಂದು ಗ್ರಾಮಸ್ಥರು ಹೇಳಿದರು. (ಏಜೆನ್ಸೀಸ್)