ಜೈಪುರ: ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಬದಲಿಸಲು ಮುಂದಾಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಆದರೆ, ಅಂಬೇಡ್ಕರ್ ಅವರೇ ಬಂದರೂ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ. ಏಕೆಂದರೆ ಸಂವಿಧಾನವು ನಮ್ಮ ಸರ್ಕಾರಕ್ಕೆ ಗೀತೆ, ಕುರಾನ್, ಬೈಬಲ್ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಜಸ್ಥಾನದ ಬಾರ್ಮೆರ್ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಪ್ರಧಾನಿ ಮೋದಿ ನಮ್ಮ ಸರ್ಕಾರಕ್ಕೆ ಸಂವಿಧಾನ ಸರ್ವಶ್ರೇಷ್ಠವಾಗಿದೆ. ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಸಂವಿಧಾನದ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿ ಜನರಿಂದ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಅನೇಕ ಬಾರಿ ಅಂಬೇಡ್ಕರ್ ಅವರನ್ನು ಅವಮಾನಿಸಿದೆ. ಸಂವಿಧಾನ ದಿನವನ್ನು ಪ್ರಸ್ತಾಪಿಸಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಎಂದಿಗೂ ಇದರ ಬಗ್ಗೆ ಮಾತನಾಡಿಲ್ಲ. ಕಾಂಗ್ರೆಸ್ ಪಕ್ಷವು ಸಂವಿಧನ್ ದಿವಸ್ ಅನ್ನು ವಿರೋಧಿಸಿದೆ ಮತ್ತು ಸಂಸತ್ತಿನಲ್ಲಿ ಅದರ ವಿರುದ್ಧ ಭಾಷಣಗಳನ್ನು ಮಾಡಿದೆ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಎಂದಿಗೂ ಅದರ ಬಗ್ಗೆ ಯೋಚನೆಯೂ ಮಾಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಿಗೆ ಮತ ಹಾಕಲು ಸಿದ್ದವಾಗಿದ್ದು, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.