ನ್ಯೂಸ್

ಪದ್ಮಶ್ರೀ-ಪದ್ಮಭೂಷಣ ಡಾ.ಪಿ.ಕೆ. ವಾರಿಯರ್ ಇನ್ನಿಲ್ಲ; ಇತ್ತೀಚೆಗಷ್ಟೇ 100 ವರ್ಷ ಪೂರೈಸಿದ್ದರು..

ನವದೆಹಲಿ: ಪದ್ಮಶ್ರೀ, ಪದ್ಮಭೂಷಣ ಪುರಸ್ಕೃತ, ಖ್ಯಾತ ಆರ್ಯುವೇದ ತಜ್ಞ, ಕೊಟ್ಟಕ್ಕಲ್ ಆರ್ಯವೈದ್ಯ ಶಾಲಾ ಮ್ಯಾನೇಜಿಂಗ್ ಟ್ರಸ್ಟೀ ಡಾ.ಪಿ.ಕೆ. ವಾರಿಯರ್ ಇಂದು ನಿಧನರಾದರು. ಇವರು ಇತ್ತೀಚೆಗಷ್ಟೇ ನೂರು ವಸಂತಗಳನ್ನು ಪೂರೈಸಿದ್ದರು.

ಆಯುರ್ವೇದವನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರ ಜನ್ಮಶತಮಾನೋತ್ಸವ ಕಳೆದ ಜೂನ್ ತಿಂಗಳಲ್ಲಿ ಆಚರಣೆಗೊಂಡಿತ್ತು. ಇಂದು ಮಧ್ಯಾಹ್ನ ಇವರು ಕೊನೆಯುಸಿರೆಳೆದರು ಎಂಬುದಾಗಿ ಮೂಲಗಳು ತಿಳಿಸಿವೆ.

1921ರ ಜೂ. 5ರಂದು ಜನಿಸಿದ್ದ ಇವರು ಕ್ವಿಟ್​ ಇಂಡಿಯಾ ಚಳವಳಿಯಲ್ಲಿ ಭಾಗವಹಿಸುವ ಸಲುವಾಗಿ ತಮ್ಮ ಆಯುರ್ವೇದ ವ್ಯಾಸಂಗವನ್ನು ಮೊಟಕುಗೊಳಿಸಿದ್ದರು. ಬಳಿಕ ಸಕ್ರಿಯ ರಾಜಕಾರಣ ತಮಗೆ ಆಗಿಬರುವಂಥದ್ದಲ್ಲ ಎಂಬುದನ್ನು ಅರಿತು ವ್ಯಾಸಂಗಕ್ಕೆ ಮರಳಿದರು. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಅಂದರೆ ತಮ್ಮ 24ನೇ ವಯಸ್ಸಿನಲ್ಲೇ ಕೊಟ್ಟಕ್ಕಲ್ ಆರ್ಯವೈದ್ಯ ಶಾಲಾ ಟ್ರಸ್ಟೀ ಆಗಿ ಸೇರಿಕೊಂಡಿದ್ದರು. ಇವರಿಗೆ ಕೇಂದ್ರ ಸರ್ಕಾರವು 1999ರಲ್ಲಿ ಪದ್ಮಶ್ರೀ ಹಾಗೂ 2010ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. (ಏಜೆನ್ಸೀಸ್)