ನ್ಯೂಸ್

ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್‌ಗೆ ಶ್ರೀಲಂಕಾದಲ್ಲಿ ಹೃದಯಾಘಾತ; ಶೀಘ್ರದಲ್ಲೇ ನಾರಾಯಣ ಹೃದಯಾಲಯಕ್ಕೆ ಶಿಫ್ಟ್​

ಬೆಂಗಳೂರು: ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆ ತರಲಾಗುತ್ತಿದೆ. ಅವರು ಶ್ರೀಲಂಕಾದ ಕೊಲಂಬೊಗೆ ತೆರಳಿದ್ದ ವೇಳೆ ಈ ಲಘು ಹೃದಯಾಘಾತವಾಗಿದ್ದು, ವಿಮಾನದ ಮೂಲಕ ಅವರನ್ನು ಬೆಂಗಳೂರಿಗೆ ಕರೆತಂದು ನಾರಾಯಣ ಹೃದಯಾಲಯದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

ಸಂಜೆ 5.30ರ ಸುಮಾರಿಗೆ ಅವರನ್ನು ಬೆಂಗಳೂರಿನ ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಕರೆ ತರಲಿದ್ದು, ಅಲ್ಲಿಂದ ಜೀರೋ ಟ್ರಾಫಿಕ್ ಮೂಲಕ ನಾರಾಯಣ ಹೃದಯಾಲಯಕ್ಕೆ ಕರೆದೊಯ್ಯಲಾಗುವುದು. ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ ಅವರು ಚಿಕಿತ್ಸೆ ನೀಡಲಿದ್ದು, ಅವರ ಆರೋಗ್ಯ ಪರಿಸ್ಥಿತಿ ಕುರಿತು ನಿಗಾ ಇರಿಸಿದ್ದಾರೆ.

ಕಸ್ತೂರಿರಂಗನ್ ಅವರಿಗೆ 83 ವರ್ಷ ವಯಸ್ಸಾಗಿದ್ದು, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿಗೂ ಅವರು ಭಾಜನರಾಗಿರುತ್ತಾರೆ.

ಶೀಘ್ರ ಚೇತರಿಕೆಗಾಗಿ ಸಿಎಂ ಹಾರೈಕೆ: ಕಸ್ತೂರಿರಂಗನ್ ಅವರಿಗೆ ಹೃದಯಾಘಾತ ಆಗಿರುವುದಕ್ಕೆ ಸಿಎಂ ಸಿದ್ದರಾಮಯ್ಯ ದುಃಖ ವ್ಯಕ್ತಪಡಿಸಿದ್ದು, ಅವರು ಕೂಡಲೇ ಚೇತರಿಸಿಕೊಂಡು ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.