ಬೆಂಗಳೂರು: ಗೆಳತಿ ಪವಿತ್ರಾಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಮೆಸ್ಸೇಜ್ ಕಳುಹಿಸಿದ್ದ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಹತ್ಯೆ ಮಾಡಿ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ನ ವಿರುದ್ಧ ಪೊಲೀಸರು ತನಿಖೆ ಪೂರ್ತಿಗೊಳಿಸಿ ಚಾರ್ಜ್ಶೀಟ್ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಚಾರ್ಜ್ಶೀಟ್ನ ಒಂದೊಂದು ಪುಟ ತೆರೆದಂತೆ ಆರೋಪಿಗಳ ಕರಾಳ ಮುಖ ಬಯಲಾಗುತ್ತಿದೆ. ಇತ್ತ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾದ ವಿಚಾರಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸಬಾರದು ಎಂದು ನಟ ದರ್ಶನ್ ಅವರು ರಿಟ್ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಗೃಹಸಚಿವ ಪರಮೇಶ್ವರ್, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಆರೋಪಿಗಳ ಪರ ವಕೀಲರಿಗೆ ಒಂದು ಪ್ರತಿಯನ್ನು ನೀಡಲಾಗುತ್ತದೆ. ಬಳಿಕ ಅದು ಸಾರ್ವಜನಿಕವಾಗಿ ಲಭ್ಯವಾಗುತ್ತದೆ. ಸಹಜವಾಗಿ ಈ ಪ್ರಕರಣ ರಾಜ್ಯದ ಗಮನ ಸೆಳೆದಿರುವುದರಿಂದ ಮಾಧ್ಯಮಗಳಲ್ಲಿ ಆದ್ಯತೆಯ ಮೇರೆಗೆ ಅದನ್ನು ತೋರಿಸಲಾಗುತ್ತದೆ.
ಸಾರ್ವಜನಿಕವಾಗಿ ಮಾತನಾಡುವುದನ್ನು ಕೋರ್ಟ್ ಪರಿಗಣಿಸುವುದಿಲ್ಲ. ಸಾಕ್ಷ್ಯ, ದಾಖಲೆಗಳ ಆಧಾರದ ಮೇಲೆ ಪ್ರಕರಣ ನಡೆಯುತ್ತದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿ, ಸಾಕ್ಷ್ಯಾಧಾರಗಳನ್ನು ಕೋರ್ಟ್‌ಗೆ ನೀಡುತ್ತಾರೆ. ಆ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಯುತ್ತದೆ. ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೊಂಡಿದ್ದು, ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ಕಚೇರಿ ಸ್ಪೋಟಿಸುವ ಬಗ್ಗೆ ಸಂಚು ನಡೆಸಿದ್ದರು ಎಂಬ ಅಂಶ ಉಲ್ಲೇಖಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರುವ ಮಿಕ್ಕ ವಿಚಾರಗಳು ಗೊತ್ತಿಲ್ಲ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ.