ಕೊಡಗು: ಚಿಕಿತ್ಸೆಗೆಂದು ದಾಖಲಾಗಿದ್ದ ವೈದ್ಯರೊಬ್ಬರು ತಡರಾತ್ರಿ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ಮಡಿಕೇರಿಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಡಾ.ಕೆ.ಪೂಣಚ್ಚ ಸಾವಿಗೀಡಾದವರು. ಕಣ್ಣಿನ ಆಪರೇಷನ್ಗೆಂದು ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದರು. ಇಂದು ಅವರಿಗೆ ಆಪರೇಷನ್ ಆಗಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಅವರು ನಾಲ್ಕನೇ ಮಹಡಿಯಿಂದ ಬಿದ್ದು ದುರಂತ ಸಾವಿಗೆ ಒಳಗಾಗಿದ್ದಾರೆ.
ತಡರಾತ್ರಿ ಮೂರು ಗಂಟೆ ಸುಮಾರಿಗೆ ಶೌಚಕ್ಕೆಂದು ಹೋಗಿದ್ದ ಅವರು ಅಲ್ಲಿಂದ ದಾರಿ ತಪ್ಪಿ ನಾಲ್ಕನೇ ಮಹಡಿಯ ಟೆರೇಸ್ಗೆ ಹೋಗಿದ್ದರು. ಟೆರೇಸ್ ಮೇಲಿನ ಪಾಚಿಯಿಂದಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 6 ಗಂಟೆಯವರೆಗೂ ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ಇರಲಿಲ್ಲ. ಬಳಿಕ ಪೂಣಚ್ಚ ಅವರ ಪತ್ನಿ ಬಂದು ಹುಡುಕತೊಡಗಿದಾಗ ಶವ ಪತ್ತೆಯಾಗಿದೆ. ಆಸ್ಪತ್ರೆಯಲ್ಲಿನ ಸುರಕ್ಷತೆ ಕುರಿತು ಪೂಣಚ್ಚ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.